ಕತ್ರಾ ವೈಷ್ಣೋದೇವಿ ಯಾತ್ರೆ ಮಾರ್ಗದಲ್ಲಿ ಭೂಕುಸಿತ: ಹಲವರಿಗೆ ಗಾಯ, ಯಾತ್ರೆ ಸ್ಥಗಿತ

ಕತ್ರಾ, ಜುಲೈ 21: ಜಮ್ಮು ಮತ್ತು ಕಾಶ್ಮೀರದ ರೆಹಾಸಿ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಸುರಿದ ಭಾರೀ ಮಳೆಯ ಪರಿಣಾಮ, ಪ್ರಸಿದ್ಧ ವೈಷ್ಣೋ ದೇವಿ ಯಾತ್ರೆಯ ಪ್ರಮುಖ ಮಾರ್ಗದಲ್ಲಿರುವ ಬಂಗಂಗಾ ಬಳಿ ಭೂಕುಸಿತ ಸಂಭವಿಸಿದೆ. ಈ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು, ಕೆಲವು ಭಕ್ತರು ಮಣ್ಣಿನ ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಪವಿತ್ರ ತೀರ್ಥಯಾತ್ರಾ ಸ್ಥಳವಾದ ಕತ್ರಾದಿಂದ ಭವನದತ್ತ ಸಾಗುವ ಹಳೆಯ ಯಾತ್ರೆ ಮಾರ್ಗದಲ್ಲಿ ಬೆಳಗ್ಗೆ ಸುಮಾರು 8 ಗಂಟೆಗೆ ಈ ಭೂಕುಸಿತ ಸಂಭವಿಸಿದೆ. ನಿರಂತರ ಮಳೆಯಿಂದ ಬೆಟ್ಟದ ಮೇಲಿನಿಂದ ಬೃಹತ್ ಗಾತ್ರದ ಕಲ್ಲುಗಳು ಹಾಗೂ ಮಣ್ಣು ಕುಸಿದು ಬಂಗಂಗಾ ಪ್ರದೇಶದ ರಸ್ತೆಯ ಮೇಲೆ ಬಿದ್ದವು. ಪರಿಣಾಮವಾಗಿ ಮಾರ್ಗದಲ್ಲಿ ಚಲಿಸುತ್ತಿದ್ದ ಅನೇಕ ಭಕ್ತರು ಅಚಾನಕ್ ಅವಘಡಕ್ಕೊಳಗಾದರು.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಕುಸಿತ ಸಂಭವಿಸಿದ ವೇಳೆ ಸ್ಥಳದಲ್ಲಿ ಭಕ್ತರಿಂದ ಕಿಕ್ಕಿರಿದಿತ್ತು. “ಹಟಾತ್ ಬೆಟ್ಟದ ಮೇಲಿಂದ ಕಲ್ಲುಗಳು ಹರಿದು ಬಿದ್ದು, ಧೂಳಿನ ಗುದಿ ಹಬ್ಬಿತ್ತು. ಕೆಲವರು ಓಡಿ ತಪ್ಪಿಸಿಕೊಂಡರು, ಕೆಲವರು ಸ್ಥಳದಲ್ಲೇ ಬಿದ್ದರು,” ಎಂದು ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತನೊಬ್ಬ ಹೇಳಿದರು.

ರಕ್ಷಣಾ ಕಾರ್ಯಾಚರಣೆ ಆರಂಭ

ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ತುರ್ತು ಸೇವಾ ದಳಗಳು ಧಾವಿಸಿವೆ. ಎನ್‌ಡಿಆರ್‌ಎಫ್, ಸ್ಥಳೀಯ ಪೊಲೀಸರು, ಮತ್ತು ಶ್ರೈನ್ ಬೋರ್ಡ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಧುಮುಕಿದ್ದಾರೆ. ಗಾಯಾಳುಗಳನ್ನು ತಕ್ಷಣ ಕತ್ರಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಭಕ್ತರ ಸುರಕ್ಷತೆ ಹಿನ್ನೆಲೆಯಲ್ಲಿ ಈ ಪುರಾತನ ಮಾರ್ಗದ ಮೂಲಕದ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇನ್ನೊಂದು ದ್ವಿತೀಯ ಮಾರ್ಗದ ಮೂಲಕ ಭಕ್ತರಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಶ್ರೈನ್ ಬೋರ್ಡ್ ಮೂಲಗಳು ತಿಳಿಸಿವೆ.

ಭಾರೀ ಮಳೆ ಮುಂದುವರಿಕೆ – ಮುನ್ನೆಚ್ಚರಿಕೆ

ಜಮ್ಮು ಪ್ರದೇಶದ ಹಲವೆಡೆ ಮುಂಗಾರು ಮಳೆ ಜೋರಾಗಿದ್ದು, ಭೂಸ್ಲೈಡಿಂಗ್‌ಗಳ ಸಂಭವ ಹೆಚ್ಚಾಗಿದೆ. ಹೀಗಾಗಿ ಯಾತ್ರೆಗೆ ಬರುತ್ತಿರುವ ಭಕ್ತರು ತಮ್ಮ ಪ್ರಯಾಣದ ಮೊದಲು ಹವಾಮಾನ ಮಾಹಿತಿ ಪರಿಶೀಲಿಸಿ, ಸಾರ್ವಜನಿಕ ನಿರ್ದೆಶನಗಳನ್ನು ಅನುಸರಿಸುವಂತೆ ಅಧಿಕಾರಿಗಳು ವಿನಂತಿಸಿದ್ದಾರೆ.