ದೆಹಲಿಯಲ್ಲಿ ಇಡಿ ಅಧಿಕಾರಿಗಳಿಂದ ಮಾಜಿ ಸಿಎಂ ಪುತ್ರಿ ಬಂಧನ

ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಬಿಆರ್‌ಎಸ್ ಎಂಎಲ್‌ಸಿ ಹಾಗೂ ಕೆಸಿಆರ್ ಪುತ್ರಿ ಕೆ. ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ಬಂಧಿಸಿದೆ. ಇದಕ್ಕಿಂತ ಮುನ್ನ ಇಡಿ ಅಧಿಕಾರಿಗಳು ಹೈದರಾಬಾದ್​​ನಲ್ಲಿ ಕವಿತಾ ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿ ಇಡಿ ಸಮನ್ಸ್ ಗಳಿಗೆ ಕವಿತಾ ಗೈರಾದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ.

ದೆಹಲಿ, ಮಾರ್ಚ್ 15 : ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ (Delhi liquor policy case) ಬಿಆರ್‌ಎಸ್ ಎಂಎಲ್‌ಸಿ ಹಾಗೂ ಕೆಸಿಆರ್ ಪುತ್ರಿ ಕೆ. ಕವಿತಾ (K kavitha) ಅವರನ್ನು ಜಾರಿ ನಿರ್ದೇಶನಾಲಯ (ED) ಶುಕ್ರವಾರ ಬಂಧಿಸಿದೆ. ಮೂಲಗಳ ಪ್ರಕಾರ ಕವಿತಾ ಅವರನ್ನು ಇಡಿ ದೆಹಲಿಗೆ ಕರೆತರುತ್ತಿದೆ. ಬಂಧನಕ್ಕೆ ಮುನ್ನ ಪ್ರಸ್ತುತ ಹಗರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನಲ್ಲಿರುವ ಕವಿತಾ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಏಜೆನ್ಸಿ ನೀಡಿದ ಹಲವಾರು ಸಮನ್ಸ್‌ಗಳಿಗೆ ಗೈರು ಹಾಜರಾದ ನಂತರ ಇಡಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಕವಿತಾ ಅವರು ತೆಲಂಗಾಣದಲ್ಲಿ ವಿಧಾನ ಪರಿಷತ್ತಿನ (MLC) ಸದಸ್ಯರಾಗಿದ್ದಾರೆ. ಈಕೆ ಭಾರತ್ ರಾಷ್ಟ್ರ ಸಮಿತಿ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿಯಾಗಿದ್ದಾರೆ. ಈ ಪ್ರಕರಣದಲ್ಲಿ ಕವಿತಾ ಅವರನ್ನು ಈ ಹಿಂದೆ ವಿಚಾರಣೆಗೊಳಪಡಿಸಿದ್ದರೂ, ಈ ವರ್ಷ ಅವರು ಎರಡು ಸಮನ್ಸ್‌ಗಳಿಗೆ ಹಾಜರಾಗಿರಲಿಲ್ಲ.

ಆಪಾದಿತ ದೆಹಲಿ ಮದ್ಯ ನೀತಿ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ‘ಸೌತ್ ಗ್ರೂಪ್’ ನ ಭಾಗವಾಗಿ ಕೆ. ಕವಿತಾ ಇದ್ದರು ಎಂದು ಇಡಿ ಆರೋಪಿಸಿದೆ. ಏಜೆನ್ಸಿ ಪ್ರಕಾರ, ಹೈದರಾಬಾದ್ ಉದ್ಯಮಿ ಶರತ್ ರೆಡ್ಡಿ, ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸದ ಮಾಗುಂಟ ಶ್ರೀನಿವಾಸಲು ರೆಡ್ಡಿ ಮತ್ತು ಅವರ ಮಗ ರಾಘವ್ ಮಾಗುಂಟ ರೆಡ್ಡಿ ಗುಂಪಿನ ಇತರ ಸದಸ್ಯರಾಗಿದ್ದಾರೆ.

ಏನಿದು ಪ್ರಕರಣ?
ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ.5ರಿಂದ 12ಕ್ಕೆ ಹೆಚ್ಚಿಸಲಾಗಿದೆ. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪ ಕೇಳಿಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇ.ಡಿ ಹಾಗೂ ಸಿಬಿಐ ಅಧಿಕಾರಿಗಳು ಕೆ. ಕವಿತಾ ಅವರನ್ನು ವಿಚಾರಣೆ ನಡೆಸಿದೆ.

ಸೌತ್‌ ಗ್ರೂಪ್‌ ಎಂಬ ಕಂಪನಿಯನ್ನು ಕೆ. ಕವಿತಾ ಸೇರಿ ಹಲವರನ್ನು ಮುನ್ನಡೆಸುತ್ತಿದ್ದು, ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ಬಳಿಕ ಇದೇ ಕಂಪನಿಗೆ ಗುತ್ತಿಗೆ ಪಡೆಯಲು ಆಮ್‌ ಆದ್ಮಿ ಪಕ್ಷದ ನೇತೃತ್ವದ ಸರ್ಕಾರಕ್ಕೆ ಲಂಚ ನೀಡಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕಾಗಿ ಇ.ಡಿ ಹಾಗೂ ಸಿಬಿಐ ಕೂಲಂಕಷ ತನಿಖೆ ನಡೆಸುತ್ತಿದೆ. ಇನ್ನು. ಕೆ. ಕವಿತಾ ಅವರನ್ನು ಬಂಧಿಸುತ್ತಲೇ, ಬಿಆರ್‌ಎಸ್‌ ನಾಯಕರು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಹಾಗೂ ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.