ಕಾಡಾನೆ ದಾಳಿ: ಮನೆ ಮೇಲೆ ತೆಂಗಿನ ಮರ ಬಿದ್ದು ಭಾರೀ ನಷ್ಟ

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬೆ ಕುಂಜಿಲ ಗ್ರಾಮ ಪಂಚಾಯಿತಿಯ ಯವಕಪಾಡಿ ಗ್ರಾಮದ ಕುಡಿಯರ ಕಾಲೋನಿಯಲ್ಲಿ ಕಳೆದ ರಾತ್ರಿ ಕಾಡಾನೆ ದಾಳಿಯೊಂದು ಸಂಭವಿಸಿದೆ. ಜಂಗಲದಿಂದ ಊರಿನತ್ತ ಬಂದಿರುವ ಕಾಡಾನೆ, ಗ್ರಾಮದಲ್ಲಿಯೇ ಆರ್ಭಟ ನಡೆಸಿದ್ದು, ಈ ವೇಳೆ ಗ್ರಾ.ನಿವಾಸಿ ಕುಡಿಯರ ಗಣೇಶ್ ಅವರ ಮನೆಯ ಮೇಲೆ ತೆಂಗಿನ ಮರವೊಂದು ಬಿದ್ದು ಮನೆಗೆ ಭಾರೀ ಹಾನಿ ಉಂಟಾಗಿದೆ.

ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡಾನೆ ಅಡ್ಡಾಡಿ, ಕೃಷಿ ಬೆಳೆಗಳನ್ನು ತಿನ್ನುವುದರ ಮೂಲಕ ಕೃಷಿಕರಿಗೆ ತೀವ್ರ ನಷ್ಟ ಉಂಟುಮಾಡಿದೆ. ಆದರೆ, ಅದೃಷ್ಟವಶಾತ್ ಮನೆಯವರು ಕಾರ್ಯನಿಮಿತ್ತ ಬೇರೆಡೆಗೆ ತೆರಳಿದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ಮಡಿಕೇರಿ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಅವರು, “ಇದು ಒಂದು ಅಥವಾ ಎರಡು ಬಾರಿ ಸಂಭವಿಸಿರುವ ಘಟನೆ ಅಲ್ಲ. ಕಳೆದ ಎರಡು ವರ್ಷಗಳಿಂದ ಇದೇ ರೀತಿಯ ಕಾಡಾನೆ ದಾಳಿಗಳಿಂದಾಗಿ ಯವಕಪಾಡಿ, ಮರಂದೋಡ, ಕುಂಜಿಲ ಸೇರಿದಂತೆ ವಿವಿಧ ಗ್ರಾಮಗಳ ನಿವಾಸಿಗಳು ಹಾನಿಗೆ ಒಳಗಾಗುತ್ತಿದ್ದಾರೆ. ಮನೆಗಳು ಧ್ವಂಸವಾಗಿದ್ದು, ತೋಟ ಬೆಳೆಗಳು ನಾಶವಾಗಿವೆ. ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ,” ಎಂದು ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಪ್ರಮುಖ ಸಮಸ್ಯೆಯಾದ ಒಂಟಿ ಸಲಗವು ಈ ಪ್ರದೇಶದಲ್ಲಿ ನಿರಂತರವಾಗಿ ಅಡ್ಡಾಡುತ್ತಿದೆ. ಕೇಂದ್ರ ಸರ್ಕಾರದಿಂದ ಆನೆ ಸೆರೆಹಿಡಿಯಲು ಆದೇಶವಿದ್ದರೂ, ಅರಣ್ಯ ಇಲಾಖೆ ಇದನ್ನು ಜಾರಿಗೊಳಿಸಲು ವಿಫಲವಾಗಿದೆ. ಈ ಸಲಗ ಪ್ರತಿವರ್ಷ ಜನಜೀವನಕ್ಕೆ ಭಯ ಹುಟ್ಟಿಸುತ್ತಿದೆ.

“ಆನೆ ದಾಳಿಯಿಂದ ಹಾನಿಗೊಳಗಾದ ಮನೆಗಳನ್ನು ಪುನರ್‌ ನಿರ್ಮಿಸಲು ತಕ್ಷಣವೇ ಸರ್ಕಾರದಿಂದ ಆರ್ಥಿಕ ನೆರವು ನೀಡಬೇಕು. ಕುಡಿಯರ ಗಣೇಶ್ ಕುಟುಂಬಕ್ಕೆ ಕನಿಷ್ಠ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನಾವು ಒತ್ತಾಯಿಸುತ್ತೇವೆ,” ಎಂದು ಮುತ್ತಪ್ಪ ಹೇಳಿದರು.