ಮಡಿಕೇರಿ: ಅಪಾಯದ ಸ್ಥಳ ಲೆಕ್ಕಿಸದೆ ಸೆಲ್ಫಿಗಾಗಿ ಮುಗಿಬಿದ್ದ ಪ್ರವಾಸಿಗರು

ಸೆಲ್ಫಿ ಹುಚ್ಚಿಗೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಬೆಟ್ಟದ ತುತ್ತ ತುದಿಯಲ್ಲಿ, ಜಲಪಾತ ಮತ್ತು ಇನ್ನಿತರೆ ಅಪಯಾದ ಸ್ಥಳದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವ ಹುಂಬುತನದಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದೀಗ, ಮಡಿಕೇರಿಯಲ್ಲೊಂದು ಮಾನವ ನಿರ್ಮಿತ ಸೆಲ್ಫಿ ಪಾಯಿಂಟ್ ನಿರ್ಮಾಣವಾಗಿದೆ.​

ಕೊಡಗು, ಜೂನ್​ 15: ಮಳೆಗಾಲ ಆರಂಭವಾಗಿದೆ, ವಾರಾಂತ್ಯ ಹಿನ್ನೆಲೆಯಲ್ಲಿ ಸಾಕಷ್ಟು ಜನರು ಮಡಿಕೇರಿಗೆ ಪ್ರವಾಸಕ್ಕೆ ಹೋಗುತ್ತಿದ್ದಾರೆ. ಹೀಗೆ ಹೋದ ಪ್ರವಾಸಿಗರು, ಅಪಯಾದ ಸ್ಥಳಗಳಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳವ ಆಸೆಯಲ್ಲಿ ಜೀವಕ್ಕೆ ಕುತ್ತು ತಂದುಕೊಳ್ಳವ ಸಾಧ್ಯತೆ ಇದೆ. ಹೌದು, ಮಡಿಕೇರಿ ನಗರದಿಂದ ಮಂಗಳೂರು ರಸ್ತೆಯಲ್ಲಿ ಎರಡು ಕಿಮಿ ಸಂಚರಿಸಿದರೆ ಸೆಲ್ಫಿ ಪಾಯಿಂಟ್ ಇದೆ. ಇದು ನೈಸರ್ಗಿಕ ಸೆಲ್ಫಿ ಪಾಯಿಂಟ್​ ಅಲ್ಲ. ಬದಲಿಗೆ 2018ರಲ್ಲಿ ಇಲ್ಲಿ ಭೂ ಕುಸಿತವಾಗಿ ರಾಷ್ಟ್ರೀಯ ಹೆದ್ದಾರಿಯೇ ಕೊಚ್ಚಿ ಹೋಗುವ ಆತಂಕ ಎದುರಾಗಿತ್ತು.

ಹೀಗಾಗಿ ರಸ್ತೆ ಅಂಚಿನ ಪ್ರಪಾತಕ್ಕೆ 100 ಅಡಿಗೂ ಅಧಿಕ ಎತ್ತರದಲ್ಲಿ ಬೃಹತ್ ತಡೆಗೋಡೆ ಕಟ್ಟಿ ಮಣ್ಣು ತುಂಬಿಸಿ, ರಸ್ತೆ ಕೊಚ್ಚಿ ಹೋಗದಂತೆ ತಡೆಯಲು ಕಾಮಗಾರಿ ಮಾಡಲಾಗಿದೆ. ಈ ತಡೆಗೋಡೆಯ ಅಂಚಿನಲ್ಲೇ ಇದೀಗ ಸೆಲ್ಫಿ ಪಾಯಿಂಟ್ ಸೃಷ್ಟಿಯಾಗಿದೆ. ಯಾಕಂದರೆ ತಡೆಗೋಡೆಯ ಅಂಚಿನಲ್ಲಿ 300 ಅಡಿಗೂ ಹೆಚ್ಚು ಆಳ ಪ್ರಪಾತವಿದ್ದು ಅತ್ತ ಬದಿ ಸುಂದರ ಬೆಟ್ಟ ಗುಡ್ಡಗಳಿವೆ. ಇಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವುದೆ ಇದೀಗ ಎಲ್ಲರಿಗೂ ಆನಂದ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ಪ್ರವಾಸಿಗರು ಈ ಸ್ಥಳ ಬಂದೊಡನೆ ಅಲ್ಲೇ ವಾಹನಗಳನ್ನು ನಿಲ್ಲಿಸಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಆಳ ಪ್ರಪಾತಕ್ಕೆ ಉರುಳಿ ಬೀಳುವ ಸಂಭವವಿದೆ. ತಡೆಗೋಡೆಯ ಅಂಚಿನಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲ. ಹಾಗೆ ನೋಡಿದರೆ ಇದು ಅಧಿಕೃತ ಪ್ರವಾಸಿ ತಾಣವೇ ಅಲ್ಲ. ಹೀಗಾಗಿ ಇಲ್ಲಿ ಸುರಕ್ಷತಾ ಕ್ರಮ ಅನುಸರಿಸುವ ಅಗತ್ಯವೂ ಇಲ್ಲ. ಆದರೆ, ಪ್ರವಾಸಿಗರು ಮಾತ್ರ ಅಪಾಯ ಲೆಕ್ಕಿಸದೆ ಫೋಟೋ ತೆಗಯಲು ಮುಂದಾಗುತ್ತಿದ್ದಾರೆ. ಇದನ್ನು ತಡೆಯುವಂತೆ ನಿಯಂತ್ರಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ಯಾವಾಗ ಸ್ಥಳೀಯರ ವಿರೋಧ ಹೆಚ್ಚಾಯಿತು, ಇದೀಗ ಪೊಲೀಸರು ಕಾರ್ಯಾಚರಣೆಗೆ ಇಳಿದು ಪ್ರವಾಸಿಗರನ್ನು ಅಲ್ಲಿಂದ ಕಳುಹಿಸುತ್ತಿದ್ದಾರೆ. ಆದರೆ, ಎಲ್ಲ ಸಮಯದಲ್ಲಿ ಪೊಲೀಸರು ಅಲ್ಲಿ ಕರ್ತವ್ಯದಲ್ಲಿ ಇರುವುದಿಲ್ಲ. ಬ್ಯಾರಿಕೇಡ್​ಗಳನ್ನ ಹಾಕಿ ಎಚ್ಚರಿಕೆ ಫಲಕ ಕೂಡ ಅಳವಡಿಸಿಲ್ಲ. ಹೀಗಾಗಿ ಈಗಲೂ ಪ್ರವಾಸಿಗರು ಅಲ್ಲಿ ಸೆಲ್ಫಿಗೆ ಮುಂದಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿಗೆ ಭದ್ರತಾ ಸಿಬ್ಬಂದಿಯೊಬ್ಬರನ್ನು ನೇಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.