ಮೈಸೂರಿನಲ್ಲಿ ಬಸ್ ಅಪಘಾತ – 21 ಮಂದಿ ಗಾಯಾಳು, ಆಘಾತಕರ ದೃಶ್ಯ

ಮೈಸೂರು: ಕೆಎಸ್‌ಆರ್‌ಟಿಸಿ ಬಸ್​ವೊಂದು ಸ್ಟೇರಿಂಗ್​ ತುಂಡಾಗಿ ದೊಡ್ಡ ಕೆರೆಗೆ ಉರುಳಿ ಬಿದ್ದು, 21 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಸರಗೂರು ತಾಲೂಕಿನಲ್ಲಿ ಸಂಭವಿಸಿದೆ. ಗಾಯಗೊಂಡವರಲ್ಲಿ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ.

ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಹೆಚ್.ಡಿ.ಕೋಟೆ ಪಟ್ಟಣದಿಂದ ಹೆಡಿಯಾಲ ಮಾರ್ಗವಾಗಿ ಕಾಡು ಬೇಗೂರಿಗೆ ತೆರಳುತ್ತಿದ್ದಾಗ ಬಸ್​ನ ಸ್ಟೇರಿಂಗ್​ ತುಂಡಾಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬೊಂತೇಗಾಲದ ಕೆರೆಗೆ ಬಸ್​ ಉರುಳಿ ಬಿದ್ದಿದೆ. ಈ ಅಪಘಾತದಲ್ಲಿ ಆರು ಮಂದಿಗೆ ಗಂಭೀರ ಗಾಯಗಳಾಗಿವೆ. ಚಾಲಕ ರವೀಶ್ ಅವರ ಮುಖ, ಗಡ್ಡಕ್ಕೆ ಪೆಟ್ಟು ಬಿದ್ದಿದೆ. ನಿರ್ವಾಹಕ ಗಣೇಶ್ ಅವರ ಬೆನ್ನು ಮೂಳೆಗೆ ಗಂಭೀರ ಪೆಟ್ಟಾಗಿದೆ.

25 ಮಂದಿ ಪ್ರಯಾಣಿಕರಿಂದ ಬಸ್​: ಪ್ರಯಾಣಿಕರಲ್ಲಿ ಮಹಿಳೆ ಹಾಗೂ ಮಗುವಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸತ್ರೆಗೆ ಕಳುಹಿಸಲಾಗಿದೆ. ಉಳಿದಂತೆ ಸಣ್ಣಪುಟ್ಟ ಗಾಯಗಳಾದವ​ರಿಗೆ ಆಸತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್​.ಡಿ.ಕೋಟೆಯಿಂದ ಸರಗೂರು ಮಾರ್ಗವಾಗಿ ಕಾಡುಬೇಗೂರು-ಕುರ್ಣೆಗಾಲ ಮೂಲಕ ಸಾಗಿ ಕೇರಳ ಗಡಿಯ ಆಲನಹಳ್ಳಿಗೆ ತೆರಳಬೇಕಿದ್ದ ಕೆಎಸ್‌ಆರ್‌ಟಿಸಿ ಬಸ್ 25 ಮಂದಿ ಪ್ರಯಾಣಿಕರನ್ನು ಹೊತ್ತು ರಾತ್ರಿ 7.30ರ ಸುಮಾರಿನಲ್ಲಿ ಹೆಚ್.ಡಿ.ಕೋಟೆ ನಿಲ್ದಾಣದಿಂದ ಹೊರಟಿತ್ತು.

ತಪ್ಪಿದ ಭಾರೀ ಅನಾಹುತ : ಪಟ್ಟಣದಿಂದ ಸುಮಾರು ಒಂದೂವರೆ ಕಿಮೀ ದೂರ ಸಾಗುವುದರೊಳಗೆ ಬಸ್‌ನ ಸ್ಟೇರಿಂಗ್ ತುಂಡಾಗಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಎಡಗಡೆ ಕಬಿನಿ ಬಲದಂಡೆ ನಾಲೆ, ಬಲಗಡೆ ಬೊಂತ್ತೇಗಾಲ ಕೆರೆ ಇದ್ದುದರಿಂದ ಬಸ್ ಎತ್ತ ಚಲಿಸಿದರೂ ಪ್ರಯಾಣಿಕರ ಪ್ರಾಣಕ್ಕೆ ಆಪತ್ತು ಎದುರಾಗುವ ಸಂಭವ ಎದುರಾಗಿತ್ತು. ಈ ವೇಳೆ ಚಾಲಕ ಕೆರೆ ಏರಿಗೆ ಅಳವಡಿಸಿದ್ದ ಕಬ್ಬಿಣದ ತಡೆಗೋಡೆಗೆ ಗುದ್ದಿಸಿ ಬಸ್​ ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಆದರೂ ಬಸ್ ಕಬ್ಬಿಣದ ತಡೆಗೋಡೆಯನ್ನು ಮುರಿದುಕೊಂಡು ಕೆರೆಗೆ ಬಿದ್ದಿದೆ. ಬಸ್ ಕೆರೆಗೆ ಉರುಳಿದ ಜಾಗದಿಂದ ನಾಲೈದು ಅಡಿಗಳ ಅಂತರದಲ್ಲೇ ಕೆರೆಯು ಭಾರಿ ಆಳವಿತ್ತು. ಹೀಗಾಗಿ ಭಾರೀ ಅನಾಹುತ ತಪ್ಪಿದೆ. ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿಯ ನೆರವಿನಿಂದ ಗಾಯಾಳುಗಳನ್ನು ಬಸ್‌ನಿಂದ ಹೊರ ತೆಗೆದು ಆಸ್ಪತ್ರೆಗೆ ರವಾನಿಸಲಾಯಿತು.

ಸರಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಶರತ್‌, ಬಿ.ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ಸರಗೂರು ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್, ಎಸ್‌ಐ ಅಶೋಕ್‌ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.