ಕೆಐಎಡಿಬಿ ಹಗರಣಕ್ಕೆ ತೀವ್ರ ತಿರುವು – ಫೇಕ್ ದಾಖಲೆ ಸೃಷ್ಟಿಸಿದ್ದ ಆರೋಪಿ ಸೆರೆ

ಧಾರವಾಡ: ಧಾರವಾಡ ಕೆಐಎಡಿಬಿ ಇಲಾಖೆಯಲ್ಲಿ ಎರಡು ಬಾರಿ ಪರಿಹಾರ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿ ಮಾಡಿದ್ದ ಆರೋಪಿ ರವಿ ಕುರುಬೆಟ್‌ನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಧಾರವಾಡ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 2010-12ರ ಅವಧಿಯಲ್ಲಿ ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿಗೆ 2012ರಲ್ಲೇ ಪರಿಹಾರ ನೀಡಿದ್ದರು. ಆದರೆ 2021-22ರಲ್ಲಿ ಮತ್ತೆ ಹಲವು ಜಮೀನುಗಳಿಗೆ ಎರಡನೇ ಬಾರಿ 19.99 ಕೋಟಿ ರೂ. ಪರಿಹಾರ ನೀಡಿದ್ದರು. ಈ ಹಿನ್ನೆಲೆ ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಕೂಡಾ ದೂರು ದಾಖಲಿಸಿಕೊಂಡಿತ್ತು. ಒಟ್ಟು 72 ಕೋಟಿ ರೂ. ಅಕ್ರಮ ಮಾಡಲಾಗಿದೆ ಎಂದು ಇಡಿ ತನಿಖೆಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ನಕಲಿ ದಾಖಲೆ ಸೃಷ್ಟಿ ಮಾಡಿದ್ದ ಆರೋಪದಡಿ ರವಿ ಕುರುಬೆಟ್‌ನನ್ನು ಇಡಿ ವಶಕ್ಕೆ ಪಡೆದಿದೆ

ಈ ಪ್ರಕರಣದಲ್ಲಿ ಹಿಂದೆ ಕೆಐಎಡಿಬಿ ನಿವೃತ್ತ ಅಧಿಕಾರಿ ವಸಂತಕುಮಾರ್ ಸಜ್ಜನ್ ಹಾಗೂ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಅಲ್ಲಾಬಕ್ಷ ದುಂಡಸಿರನ್ನು ಬಂಧಿಸಲಾಗಿತ್ತು.