ಗಾಂಜಾ ನಶೆಯಲ್ಲಿ ಕ್ರೂರ ಕೃತ್ಯ – ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಂತರ ಹ**

ರಾಮನಗರ: ಗಾಂಜಾ ಮತ್ತಿನಲ್ಲಿ 14 ವರ್ಷದ ಬಾಲಕಿಯ ಮೇಲೆ ಆತ್ಯಚಾರವೆಸಗಿ ಹತ್ಯೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ರಾಯಚೂರು ಮೂಲದವನು ಎಂದು ತಿಳಿದು ಬಂದಿದೆ. ಬೆಂಗಳೂರು ದಕ್ಷಿಣದ ತಾವರೆಕೆರೆ ಟೌನ್‍ನಲ್ಲಿ ಬುಧವಾರ ಈ ಪ್ರಕರಣ ನಡೆದಿತ್ತು. ಬಾಲಕಿಯ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿ ಮನೆಗೆ ಬಂದು, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ ಸಿಲಿಂಡರ್​​ನಿಂದ ಮುಖಕ್ಕೆ ಹೊಡೆದು ಕೊಲೆ ಮಾಡಿ, ಸಿಲಿಂಡರ್‌ನ್ನು ಹೊತ್ತೊಯ್ದು ಪಕ್ಕದ ಗ್ರಾಮದಲ್ಲಿ ಮಾರಾಟ ಮಾಡಿದ್ದ ಎಂದು ತಿಳಿದುಬಂದಿದೆ.

ಕೊಪ್ಪಳದಿಂದ ಹೊಟ್ಟೆಪಾಡಿಗಾಗಿ ಕೆಲಸಕ್ಕಾಗಿ ಬಾಲಕಿಯ ಕುಟುಂಬ ತಾವರೆಕೆರೆಗೆ ಬಂದು ನೆಲೆಸಿತ್ತು. ಬಾಲಕಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಬುಧವಾರ ಶಾಲೆಗೆ ಹೋಗದೇ ಮನೆಯಲ್ಲೇ ಇದ್ದಳು. ಬಾಲಕಿಯ ತಂದೆ, ತಾಯಿ, ಸಹೋದರ ಕೆಲಸಕ್ಕೆ ಹೋಗಿದ್ದ ವೇಳೆ ಆರೋಪಿ ಕೃತ್ಯ ಎಸಗಿ ಪರಾರಿಯಾಗಿದ್ದ.

ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.