ಚಿತ್ರಕೂಟ (ಮಧ್ಯಪ್ರದೇಶ): ಗಂಡನ ಹೆಸರಿನಲ್ಲಿದ್ದ 2 ಕೋಟಿ ವಿಮೆ ಪಡೆಯಲು ಮಹಿಳೆಯೊಬ್ಬರು ನಕಲಿ ಗಂಡನ ಸೃಷ್ಟಿಸಿ, ಆತನನ್ನು ಜೀವಂತವಾಗಿ ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಚಿತ್ರಕೂಟದಲ್ಲಿ ವರದಿಯಾಗಿದೆ. ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿರುವ ಪೊಲೀಸರು ಮಹಿಳೆ ಮತ್ತು ಆಕೆಯ ಅಸಲಿ ಗಂಡನನ್ನು ಬಂಧಿಸಿದ್ದಾರೆ.

ಏನಿದು ಘಟನೆ?: ಜೂನ್ 30 ರಂದು, ಮಧ್ಯಪ್ರದೇಶದ ಚಿತ್ರಕೂಟ ಜಿಲ್ಲೆಯ ರಾಜಾಪುರ ಪೊಲೀಸ್ ಠಾಣೆ ಪ್ರದೇಶದಲ್ಲಿ ಬೆಂಕಿಗೆ ಆಹುತಿಯಾದ ಆಲ್ಟೋ ಕಾರಿನಲ್ಲಿ ಅರ್ಧ ಸುಟ್ಟು ಹೊಂದ ಶವವೊಂದು ಪತ್ತೆಯಾಗಿತ್ತು. ಆರಂಭದಲ್ಲಿ ಇದನ್ನು ಅಪಘಾತ ಎಂದು ಪೊಲೀಸರು ಭಾವಿಸಿದ್ದರು. ಆದರೆ, ತನಿಖೆಯಲ್ಲಿ ಇದು ವಿಮೆ ಪರಿಹಾರ ಹಣವನ್ನು ಪಡೆಯಲು ಮಾಡಿರುವ ಪಿತೂರಿ ಎಂಬುದು ಬಯಲಾಗಿದೆ.
ಘಟನೆ ಕುರಿತು ಮಾತನಾಡಿರುವ ಎಸ್ಪಿ ಅರುಣ್ ಕುಮಾರ್ ಸಿಂಗ್, ಈ ಪ್ರಕರಣ ಬೆಳಕಿಗೆ ಬಂದಾಕ್ಷಣ ಮಧ್ಯಪ್ರದೇಶದ ರೇವಾ ನಿವಾಸಿಯಾಗಿರುವ ಹೇಮಾ ಸಿಂಗ್, ಕಾರಿನಲ್ಲಿ ಸುಟ್ಟು ಹೋಗಿದ್ದ ಶವ ತನ್ನ ಗಂಡನದ್ದು ಎಂದು ತಿಳಿಸಿದ್ದರು. ಸ್ಥಳದಲ್ಲಿ ಸುಟ್ಟು ಹೋದ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಕೂಡ ಪಡೆಯಲಾಗಿತ್ತು. ಈ ವಸ್ತುಗಳು ಸುನೀಲ್ ಸಿಂಗ್ ಸಾವನ್ನಪ್ಪಿರುವುದು ಎಂಬುದನ್ನು ದೃಢಪಡಿಸಿತ್ತು. ಆರಂಭಿಕ ಪತ್ತೆ ಬಳಿಕ ಅಂತ್ಯಕ್ರಿಯೆ ಕೂಡ ನಡೆಸಲಾಯಿತು.
ಈ ನಡುವೆ ಪೊಲೀಸರು ಶವದ ಗುರುತು ಪತ್ತೆಗೆ ಡಿಎನ್ಎ ಪರೀಕ್ಷೆಗೆ ಒತ್ತಾಯಿಸಿದಾಗ ಹೇಮಾ ಅದನ್ನು ತಪ್ಪಿಸುವ ಪ್ರಯತ್ನ ಮಾಡಿದ್ದಳು. ಈ ನಡುವೆ ಪೊಲೀಸರು ಸುನೀಲ್ ಸಿಂಗ್ ಜೀವಂತವಾಗಿದ್ದು, ತನ್ನ ಸಂಬಂಧಿಕರ ಮನೆಯಲ್ಲಿ ಅಡಗಿರುವ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದರು. ಈ ಮಾಹಿತಿ ಆಧಾರದ ಮೇಲೆ ಮನೆ ಮೇಲೆ ದಾಳಿ ಮಾಡಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಸುನೀಲ್ ತನ್ನ ತಪ್ಪು ಒಪ್ಪಿಕೊಂಡಿದ್ದು, ಹೇಮಾ ಬ್ಯೂಟಿ ಪಾರ್ಲರ್ ತೆರೆಯಬೇಕು ಎಂದು 55 ಲಕ್ಷ ಲೋನ್ ಪಡೆದಿದ್ದಳು. ಆದರೆ, ಕೋವಿಡ್ ಲಾಕ್ಡೌನ್ನಿಂದಾಗಿ ಇಎಂಐ ಕಟ್ಟಲು ಸಾಧ್ಯವಾಗದೇ ಈ ರೀತಿ ಕೃತ್ಯಕ್ಕೆ ಮುಂದಾದೆವು ಎಂದು ತಿಳಿಸಿದ್ದರು. ಅಲ್ಲದೇ ದಕ್ಷಿಣ ಭಾರತದ ಸಿನಿಮಾವೊದನ್ನು ಯೂಟ್ಯೂಬ್ನಲ್ಲಿ ನೋಡಿ ಪ್ರೇರಣೆಗೊಂಡು ಈ ಕೃತ್ಯ ಎಸಗಿದ್ದಾಗಿ ಅವರು ಹೇಳಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೊದಲಿಗೆ 2 ಕೋಟಿ ಜೀವ ವಿಮೆ ಪಡೆದಿದ್ದು, ಈತನ ದೇಹವನ್ನೇ ಹೋಲುವ ವಿನಯ್ ಚೌಹಾಣ್ ಎಂಬ ವ್ಯಕ್ತಿಗೆ ಆಲ್ಕೋಹಾಲ್ ಆಮಿಷ ನೀಡಿ ಕಾರಿನಲ್ಲಿ ಕೂರುವಂತೆ ಮಾಡಿದೆವು. ಬಳಿಕ ಕರ್ಪೂರ ಮತ್ತು ಗ್ಯಾಸ್ ಸಿಲಿಂಡರ್ ಮೂಲಕ ಆತನನ್ನು ಜೀವಂತವಾಗಿ ಸುಟ್ಟು ಹಾಕಿದೆವು. ಆ ಬಳಿಕ ಸುನೀಲ್ ತಲೆ ಮರೆಸಿಕೊಳ್ಳುವ ನಿರ್ಧಾರ ಮಾಡಿದ್ದು, ತಾನು ಪೊಲೀಸರ ದಿಕ್ಕು ತಪ್ಪಿಸಲು ನಿರ್ಧರಿಸಿದ್ದೆವು ಎಂದು ಆರೋಪಿ ಹೇಮಾ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ವಿನಯ್ ಸಹೋದರ ಆತನ ಕಣ್ಮರೆ ಕುರಿತು ಪ್ರಕರಣ ದಾಖಲಿಸಿದ್ದರಿಂದ ಈ ಕೊಲೆ ರಹಸ್ಯ ಬಯಲಾಗಲು ನೆರವು ನೀಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದೀಗ ಮೃತನ ಗುರುತು ಪತ್ತೆಗೆ ಡಿಎನ್ಎ ಪರೀಕ್ಷೆ ನಡೆಸಲಾಗುವುದು. ಈ ಘಟನೆ ಆರ್ಥಿಕ ಲಾಭಕ್ಕಾಗಿ ನಡೆಸಿ ಯೋಜಿತವಾಗಿ ಮಾಡಲಾಗಿದೆ ಎಂದು ಕೊಲೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


