ಅಮೆರಿಕದಲ್ಲಿ ಟ್ರಕ್, ಕಾರು ನಡುವೆ ಅಪಘಾತ – ಭಾರತ ಮೂಲದ ನಾಲ್ವರು ಸಜೀವ ದಹನ

ಗ್ರೀನ್ ಕೌಂಟಿ, ಅಮೆರಿಕ: ಅಮೆರಿಕದ ಗ್ರೀನ್ ಕೌಂಟಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದರಲ್ಲಿ ಭಾರತದ ಹೈದರಾಬಾದ್ ಮೂಲದ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ದುರಂತ ಸೋಮವಾರ ನಡೆದಿದೆ. ಮೃತರನ್ನು ಶ್ರೀ ವೆಂಕಟ್ (40), ತೇಜಸ್ವಿನಿ (36), ಮತ್ತು ಅವರ ಇಬ್ಬರು ಮಕ್ಕಳಾದ ಸಿದ್ಧಾರ್ಥ (9) ಹಾಗೂ ಮೃದಾ (7) ಎಂದು ಗುರುತಿಸಲಾಗಿದೆ. ಈ ಕುಟುಂಬವು ಡಲ್ಲಾಸ್‌ನಲ್ಲಿ ವಾಸವಾಗಿದ್ದು, ರಜೆಯ ನಿಮಿತ್ತ ಅಟ್ಲಾಂಟಾದ ಸಂಬಂಧಿಕರನ್ನು ಭೇಟಿಯಾಗಿ ಡಲ್ಲಾಸ್‌ಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಅಪಘಾತವು ಗ್ರೀನ್ ಕೌಂಟಿಯಲ್ಲಿ ರಾಂಗ್ ರೂಟ್‌ನಲ್ಲಿ ಬಂದ ಮಿನಿ ಟ್ರಕ್ ಒಂದು ಈ ಕುಟುಂಬದ ಕಾರಿಗೆ ಡಿಕ್ಕಿ ಹೊಡೆದಿದೆ. ಘರ್ಷಣೆಯ ರಭಸಕ್ಕೆ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ನಾಲ್ವರೂ ಸಜೀವ ದಹನವಾಗಿದ್ದಾರೆ. ಅಪಘಾತದ ತೀವ್ರತೆಯಿಂದಾಗಿ ಶವಗಳು ಗುರುತಿಸಲಾಗದ ಸ್ಥಿತಿಯಲ್ಲಿದ್ದು, ಡಿಎನ್‌ಎ ಪರೀಕ್ಷೆ ಮತ್ತು ದಂತ ದಾಖಲೆಗಳ ಮೂಲಕ ಗುರುತು ದೃಢೀಕರಣ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತದೇಹಗಳನ್ನು ಗುರುತಿಸಿದ ಬಳಿಕ ಹೈದರಾಬಾದ್‌ಗೆ ಕೊಂಡೊಯ್ಯಲು ಭಾರತೀಯ ಕಾನ್ಸುಲೇಟ್ ಅಧಿಕಾರಿಗಳು ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ.