ಬಾಲ್ಯ ವಿವಾಹಕ್ಕೆ ನಿಯಂತ್ರಣ ಹಾಕಲು ಸರ್ಕಾರಗಳು ಹಲವು ಕಾರ್ಯಕ್ರಮ;  ಬಾಲ್ಯ ವಿವಾಹಕ್ಕೆ ಪ್ರಯತ್ನ, ನಿಶ್ಚಿತಾರ್ಥವೂ ಅಪರಾಧ; ಏನೆಲ್ಲಾ ಶಿಕ್ಷೆ, ದಂಡ?

ಬೆಂಗಳೂರು: ರಾಜ್ಯದಲ್ಲಿ ಬಾಲ್ಯ ವಿವಾಹದ ಪ್ರಮಾಣ ವರ್ಷಂಪ್ರತಿ ಹೆಚ್ಚುತ್ತಲೇ ಇದೆ.‌ ಅಧಿಕಾರಿಗಳು ಎಷ್ಟೇ ಜಾಗೃತಿ ಮೂಡಿಸಿದರೂ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.‌ ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಇದೀಗ ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ), 2025 ಕರಡು ಮಸೂದೆ ಸಿದ್ಧಪಡಿಸಿದೆ.‌

ಆಧುನಿಕ ಕಾಲಮಾನದಲ್ಲೂ ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗು ಅವ್ಯಾಹತವಾಗಿ ಮುಂದುವರೆದಿದೆ. ಅದರಲ್ಲೂ ಕರ್ನಾಟಕದಂತಹ ಪ್ರಗತಿಪರ ರಾಜ್ಯದಲ್ಲೂ ಅನಿಷ್ಟ ಪದ್ಧತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ.‌ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಬಾಲ್ಯ ವಿವಾಹಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.‌ ರಾಜ್ಯ ಸರ್ಕಾರ ಈ ಸಾಮಾಜಿಕ ಪಿಡುಗನ್ನು ನಿಯಂತ್ರಿಸಲು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಪ್ರತಿ ವರ್ಷ ಕ್ರಿಯಾ ಯೋಜನೆಗಳನ್ನು ರೂಪಿಸಲಾಗುತ್ತದೆ. ಆದರೆ, ವಾಸ್ತವದಲ್ಲಿ ಅದು ಯಾವುದೂ ನಿರೀಕ್ಷಿತ ಫಲ ನೀಡುತ್ತಿಲ್ಲ. ಇದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.‌

4 ವರ್ಷಗಳಲ್ಲಿ ರಾಜ್ಯದಲ್ಲಿ 2,165 ಬಾಲ್ಯ ವಿವಾಹ: ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಅಂದರೆ 2021-22ರಿಂದ 2024-25ರ ವರೆಗೆ ಬರೋಬ್ಬರಿ 2,165 ಬಾಲ್ಯ ವಿವಾಹಗಳು ನಡೆದಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. 2021-22ರಲ್ಲಿ 418 ಬಾಲ್ಯ ವಿವಾಹಗಳು ನಡೆದರೆ, 2022-23ರಲ್ಲಿ 328 ಬಾಲ್ಯ ವಿವಾಹಗಳು ವರದಿಯಾಗಿವೆ. ಕಾಂಗ್ರೆಸ್ ಸರ್ಕಾರದ ಆಡಳಿತ ಆರಂಭವಾದ 2023-24ರಲ್ಲಿ ಬಾಲ್ಯ ವಿವಾಹ ಪ್ರಕರಣ 719ಕ್ಕೆ ಏರಿಕೆಯಾಗಿದೆ. 2024-25ರಲ್ಲಿ 700 ಬಾಲ್ಯವಿವಾಹಗಳು ಸೇರಿ ಕಾಂಗ್ರೆಸ್ ಆಡಳಿತದ ಎರಡು ವರ್ಷಗಳಲ್ಲೇ 1,416 ಬಾಲ್ಯ ವಿವಾಹಗಳು ಜರುಗಿವೆ.

2024-25 ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 700 ಬಾಲ್ಯ ವಿವಾಹಗಳು ನಡೆದಿವೆ. ಒಟ್ಟು 3,049 ಬಾಲ್ಯ ವಿವಾಹ ದೂರುಗಳು ಸ್ವೀಕೃತವಾಗಿವೆ. ಈ ಪೈಕಿ 2,349 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಇದರಲ್ಲಿ ಅತಿ ಹೆಚ್ಚು ಶಿವಮೊಗ್ಗ ಜಿಲ್ಲೆಯಲ್ಲಿ 79 ಬಾಲ್ಯ ವಿವಾಹಗಳು ನಡೆದಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಜಿಲ್ಲೆ ಬೆಳಗಾವಿಯಲ್ಲಿ 78 ಬಾಲ್ಯ ವಿವಾಹ ನಡೆದಿದ್ದು, ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಚಿತ್ರದುರ್ಗದಲ್ಲಿ 74, ಬಾಗಲಕೋಟೆ ಜಿಲ್ಲೆಯಲ್ಲಿ 60, ಸಿಎಂ ತವರು ಜಿಲ್ಲೆ ಮೈಸೂರಿನಲ್ಲಿ 60 ಹಾಗೂ ಮಂಡ್ಯದಲ್ಲಿ 57 ಬಾಲ್ಯ ವಿವಾಹಗಳು ನಡೆದಿವೆ.

ಬಾಲ್ಯ ವಿವಾಹ ತಡೆಗೆ ಮಸೂದೆ ಸಿದ್ದಪಡಿಸಲು ಸೂಚನೆ: ಮೇ 31ರಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳೊಂದಿಗಿನ ಸಭೆಯಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಕುರಿತಾಗಿ ಗಂಭೀರವಾಗಿ ಚರ್ಚಿಸಲಾಗಿತ್ತು. ಸಭೆಯಲ್ಲಿ ಈ ಪಿಡುಗನ್ನು ತಡೆಯಲು ವಿಫಲವಾಗಿರುವ ಅಧಿಕಾರಿಗಳನ್ನು ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದರು. ಜೊತೆಗೆ, ಮುಖ್ಯಮಂತ್ರಿಗಳು ಹಾಗೂ ಕಾನೂನು ಸಚಿವರು ಮೌಖಿಕವಾಗಿ, ಬಾಲ್ಯವಿವಾಹಗಳನ್ನು ಮಾಡಲು ಪ್ರಯತ್ನ, ಸಿದ್ಧತೆ ಹಾಗೂ ನಿಶ್ಚಿತಾರ್ಥ ಮಾಡುವುದರ ವಿರುದ್ಧ ಒಂದು ವಿಧೇಯಕವನ್ನು ಸಿದ್ಧಪಡಿಸಲು ಸೂಚಿಸಿದ್ದರು.‌

ಈಗಾಗಲೇ ಕೇಂದ್ರದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006 ಅಧಿನಿಯಮ ಜಾರಿಯಲ್ಲಿದೆ.‌ ಜೊತೆಗೆ ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ಮಸೂದೆ, 2021 ಲೋಕಸಭೆಯಲ್ಲಿ ಅಂಗೀಕಾರಕ್ಕಾಗಿ ಬಾಕಿ ಇದೆ. 2006ರ ಕೇಂದ್ರದ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಕರಡು ಮಸೂದೆ ಸಿದ್ದಪಡಿಸಿದೆ. ಈ ಕರಡು ಮಸೂದೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರ ಅನುಮೋದನೆ ಪಡೆದು, ವಿಧೇಯಕವನ್ನು ಪರಿಶೀಲನಾ ಸಮಿತಿಯ ಮುಂದಿಡಲಾಗಿದೆ.

ಬಾಲ್ಯ ವಿವಾಹ ನಿಷೇಧಿಸುವ ಕರಡು ಮಸೂದೆ ಸಿದ್ಧ: ಬಾಲ್ಯ ವಿವಾಹಕ್ಕೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಲು ಸರ್ಕಾರ ಇದೀಗ ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) 2025 ಕರಡು ವಿಧೇಯಕವನ್ನು ಸಿದ್ಧಪಡಿಸಿದೆ. ರಾಜ್ಯದ ಹೊಸ ಮಸೂದೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006ಗೆ ತಿದ್ದುಪಡಿ ತರಲಾಗಿದೆ.

ಪ್ರಸ್ತಾಪಿತ ರಾಜ್ಯದ ಮಸೂದೆಯಲ್ಲಿ ಕೇಂದ್ರದ ಮೂಲ ಕಾಯ್ದೆಗೆ ಹೊಸ ಸೆಕ್ಷನ್​ಗಳಾದ ‘9ಎ’, ’12ಎ’ ಮತ್ತು ’13ಎ’ಯನ್ನು ಸೇರ್ಪಡೆಗೊಳಿಸಲಾಗಿದೆ. ಜೊತೆಗೆ ಕೇಂದ್ರದ ಕಾಯ್ದೆಯಲ್ಲಿನ ಸೆಕ್ಷನ್ 10ಕ್ಕೆ ತಿದ್ದುಪಡಿ ತರಲಾಗಿದೆ. ಆ ಮೂಲಕ ರಾಜ್ಯದಲ್ಲಿ ಬಾಲ್ಯ ವಿವಾಹಕ್ಕೆ ಕಟ್ಟುನಿಟ್ಟಿನ ಕಡಿವಾಣ ಹಾಕಲು ನಿಯಮವನ್ನು ಇನ್ನಷ್ಟು ಬಲಗೊಳಿಸಲು ಮುಂದಾಗಿದೆ.‌

ರಾಜ್ಯದ ಪ್ರಸ್ತಾಪಿತ ಹೊಸ ಮಸೂದೆಯಲ್ಲೇನಿದೆ?: ಹೊಸ ಕರಡು ಮಸೂದೆ ಪ್ರಕಾರ, ಬಾಲ್ಯ ವಿವಾಹಗಳನ್ನು ಮಾಡಲು ಪ್ರಯತ್ನ, ಸಿದ್ಧತೆ, ನಿಶ್ಚಿತಾರ್ಥ ಮಾಡಲು ಪ್ರಯತ್ನ ಹಾಗೂ ಸಿದ್ಧತೆ ಕೂಡ ಶಿಕ್ಷಾರ್ಹವಾಗಿದೆ.‌ ಆ ನಿಟ್ಟಿನಲ್ಲಿ ರಾಜ್ಯದ ಪ್ರಸ್ತಾಪಿತ ಮಸೂದೆಯಲ್ಲಿ ಸೆಕ್ಷನ್ 9Aನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗುತ್ತಿದೆ. ಕೇಂದ್ರದ ಮೂಲ ಕಾಯ್ದೆಯಲ್ಲಿನ ಸೆಕ್ಷನ್ 9ರಂತೆ ಬಾಲಕಿಯ ಜೊತೆ ವಿವಾಹ ಮಾಡುವ ವಯಸ್ಕ ವ್ಯಕ್ತಿಗೆ ಶಿಕ್ಷೆ ನೀಡುವ ಅಂಶ ಇದೆ. ರಾಜ್ಯದ ಪ್ರಸ್ತಾಪಿತ ಮಸೂದೆಯಲ್ಲಿ ಹೊಸದಾಗಿ ಸೆಕ್ಷನ್ 9A ಸೇರ್ಪಡೆಗೊಳಿಸಿದ್ದು, ಬಾಲ್ಯ ವಿವಾಹಗಳನ್ನು ಮಾಡಲು ಪ್ರಯತ್ನ, ಸಿದ್ಧತೆ ಹಾಗೂ ನಿಶ್ಚಿತಾರ್ಥಕ್ಕೆ ಪ್ರಯತ್ನ ಹಾಗೂ ಸಿದ್ಧತೆ ಮಾಡುವುದು ಕೂಡ ಶಿಕ್ಷಾರ್ಹವಾಗಿರಲಿದೆ.‌ ಅದರಂತೆ ಗರಿಷ್ಠ ಎರಡು ವರ್ಷ ಜೈಲು ಅಥವಾ 1 ಲಕ್ಷ ರೂ.ವರೆಗೆ ದಂಡ ಅಥವಾ ಎರಡೂ ಅನ್ವಯವಾಗಲಿದೆ.

ಇದರ ಜೊತೆಗೆ, ಪ್ರಸ್ತಾಪಿತ ಮಸೂದೆಯಲ್ಲಿ ಬಾಲ್ಯ ವಿವಾಹವನ್ನು ನೆರವೇರಿಸುವುದರ ಜೊತೆಗೆ ಬಾಲ್ಯ ವಿವಾಹಕ್ಕೆ ಸಿದ್ಧತೆ ಮಾಡುವುದನ್ನೂ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಕೇಂದ್ರದ ಮೂಲ ಕಾಯ್ದೆಯಲ್ಲಿ ಬಾಲ್ಯ ವಿವಾಹ ನೆರವೇರಿಸುವುದು ಮಾತ್ರ ಶಿಕ್ಷಾರ್ಹ ಅಪರಾಧವಾಗಿದೆ. ರಾಜ್ಯದ ತಿದ್ದುಪಡಿ ಮಸೂದೆಯಲ್ಲಿ ಸಿದ್ಧತೆ ನಡೆಸುವುದನ್ನೂ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತಿದೆ. ಬಾಲ್ಯ ವಿವಾಹಕ್ಕೆ ಕುಮ್ಮಕ್ಕು ನೀಡುವುದರ ಜೊತೆಗೆ ಬಾಲ್ಯ ವಿವಾಹದ ಸಿದ್ಧತೆಗಳಲ್ಲಿ ಪಾಲ್ಗೊಳ್ಳುವುದು ಮತ್ತು ನಿಶ್ಚಿತಾರ್ಥ ಮಾಡುವುದನ್ನೂ ಶಿಕ್ಷಾರ್ಹ ಅಪರಾಧ ಎಂಬ ಅಂಶವನ್ನು ಸೇರ್ಪಡೆಗೊಳಿಸಲಾಗಿದೆ.

ಬಾಲ್ಯ ವಿವಾಹದ ನಿಶ್ಚಿತಾರ್ಥವೂ ಅನೂರ್ಜಿತ: ರಾಜ್ಯ ಸಿದ್ಧಪಡಿಸಿರುವ ಹೊಸ ಮಸೂದೆಯಡಿ ಬಾಲ್ಯ ವಿವಾಹದ ನಿಶ್ವಿತಾರ್ಥವನ್ನು ಅನೂರ್ಜಿತ ಎಂದು ಪರಿಗಣಿಸಲಾಗುತ್ತದೆ. ಈ ನಿಟ್ಟಿನಲ್ಲಿ 12Aಯನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಕೇಂದ್ರದ ಮೂಲ ಕಾಯ್ದೆಯ ಸೆಕ್ಷನ್ 12ರಂತೆ ಬಾಲ್ಯ ವಿವಾಹವನ್ನು ಅನೂರ್ಜಿತ ಎಂದು ಪರಿಗಣಿಸಲಾಗಿದೆ. ರಾಜ್ಯದ ಪ್ರಸ್ತಾಪಿತ ಮಸೂದೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಬಾಲ್ಯ ವಿವಾಹದ ನಿಶ್ಚಿತಾರ್ಥವನ್ನೂ ಅನೂರ್ಜಿತ ಎಂದು ಪರಿಗಣಿಸಲಾಗುತ್ತದೆ.

ರಾಜ್ಯದ ಪ್ರಸ್ತಾಪಿತ ಮಸೂದೆಯಲ್ಲಿ ಸೆಕ್ಷನ್ 13Aನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಅದರಂತೆ, ಬಾಲ್ಯ ವಿವಾಹದ ನಿಶ್ಚಿತಾರ್ಥಕ್ಕೆ ತಡೆಯಾಜ್ಞೆ ನೀಡುವ ಅಧಿಕಾರವನ್ನು ನ್ಯಾಯಾಲಯಕ್ಕೆ ನೀಡಲಾಗಿದೆ. ಅದರ ಪ್ರಕಾರ ಅಧಿಕಾರಿ ಹಾಗೂ ಯಾವುದೇ ವ್ಯಕ್ತಿ ನೀಡಿದ ಮಾಹಿತಿ ಆಧಾರದಲ್ಲಿ ಪ್ರಥಮ‌ ದರ್ಜೆಯ ಮ್ಯಾಜಿಸ್ಟ್ರೇಟ್ ಅಥವಾ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್​​ಗೆ ಬಾಲ್ಯ ವಿವಾಹದ ನಿಶ್ವಿತಾರ್ಥ ನಡೆಸಲು ಉದ್ದೇಶಿಸುತ್ತಿರುವುದು ಮನವರಿಕೆಯಾದರೆ ಅಂತಹ ವ್ಯಕ್ತಿ, ಸಂಘಟನೆ ಹಾಗೂ ಸಂಸ್ಥೆಗಳ ವಿರುದ್ಧ ತಡೆಯಾಜ್ಞೆ ನೀಡುವ ಅಧಿಕಾರ ನೀಡಲಾಗಿದೆ.