ರಿಷಬ್ ಶೆಟ್ಟಿ ಜನ್ಮದಿನಕ್ಕೆ ‘ಕಾಂತಾರ: ಚಾಪ್ಟರ್ 1’ ಚಿತ್ರದ ಕಡೆಯಿಂದ ಬಿಗ್ ಅಪ್​ಡೇಟ್​

2022 ಸೆಪ್ಟೆಂಬರ್​ 30. ಕನ್ನಡ ಚಿತ್ರರಂಗದ ಕೀರ್ತಿ ಮತ್ತೊಮ್ಮೆ ಉತ್ತುಂಗಕ್ಕೇರಿದ ದಿನ. ಕಾಂತಾರ ಸಿನಿಮಾ ತೆರೆಕಂಡು ಬ್ಲಾಕ್​ಬಸ್ಟರ್​ ಆದ ದಿನ. ಈ ಚಿತ್ರದ ಮೂಲಕ ತಮ್ಮ ಜನಪ್ರಿಯತೆಯನ್ನು ಗಡಿಮೀರಿ ವಿಸ್ತರಿಸಿಕೊಂಡ ರಿಷಬ್​ ಶೆಟ್ಟಿ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 42ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟನಿಗೆ ಕುಟುಂಬಸ್ಥರು, ಸಿನಿ ಸ್ನೇಹಿತರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಅದರಂತೆ, ಕಾಂತಾರ ಚಿತ್ರತಂಡ ಕೂಡಾ ಬಹಳ ವಿಶೇಷವಾಗಿ ಶುಭ ಕೋರಿದೆ.

ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಲ್ಲಿ ಈಗಾಗಲೇ ಅಪಾರ ಉತ್ಸಾಹವನ್ನು ಹುಟ್ಟುಹಾಕಿರುವ ಈ ಕಾಂತಾರ ಪ್ರೀಕ್ವೆಲ್​​ ಅಕ್ಟೋಬರ್ 2ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಶೆಟ್ಟಿ ಮತ್ತು ಚಿತ್ರದ ನಿರ್ಮಾಪಕರು ಈಗಾಗಲೇ ಇದನ್ನು ಸ್ಪಷ್ಟಪಡಿಸಿದ್ದಾರೆ. ಇದೀಗ ನಟನ ಹುಟ್ಟುಹಬ್ಬದ ಹಿನ್ನೆಲೆ, ಪೋಸ್ಟರ್​ ಅನಾವರಣಗೊಳಿಸಿದ್ದಾರೆ. ಇದು ಸಿನಿಮಾ ನೋಡುವ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ.