ನಡು ರಸ್ತೆಯಲ್ಲೇ ಬಸ್ ಧಗಧಗ.. ಸ್ಥಳದಲ್ಲೇ ಜೀವ ಚೆಲ್ಲಿದ ಬೈಕ್ ಸವಾರ, 40 ಪ್ರಯಾಣಿಕರು ಸೇಫ್

ಚಿತ್ರದುರ್ಗ : ಚಿತ್ರದುರ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರವಾದ ಅಪಘಾತ ಸಂಭವಿಸಿದ್ದು ಬೈಕಿಗೆ ಖಾಸಗಿ ಬಸ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ಮದಕರಿಪುರ ಬಳಿ ಸಂಭವಿಸಿದೆ. ಮೃತ ಬೈಕ್ ಸವಾರನನ್ನು ಬಚ್ಚಬೋರನಹಟ್ಟಿ ಗ್ರಾಮದ ರಮೇಶ್ (35) ಎಂದು ಗುರುತಿಸಲಾಗಿದೆ. ಬೈಕ್‌ಗೆ ಡಿಕ್ಕಿಯಾದ ಬಳಿಕ ಖಾಸಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖಾಸಗಿ ಬಸ್ ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿತ್ತು. ಅಪಘಾತ ಕುರಿತಂತೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್​ ಕೆಳ ಭಾಗದಲ್ಲಿ ಬೈಕ್​ ಸಿಲುಕಿರುವುದು, ಅಪಘಾತ ಸಂಭವಿಸಿದ್ದು ಬಸ್​ ಚಾಲಕನಿಗೆ ತಕ್ಷಣಕ್ಕೆ ಗೊತ್ತಾಗಿಲ್ಲ. ಹೀಗಾಗಿ ಬಸ್​ ಚಾಲನೆ ಮಾಡಿಕೊಂಡು ಹಾಗೇ ಸ್ವಲ್ಪ ದೂರ ಬಂದಿದ್ದಾರೆ. ಈ ವೇಳೆ ಬೈಕ್ ಮತ್ತು ಬಸ್ಸಿನ ನಡುವೆ ಸ್ಪಾರ್ಕ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ದೊಡ್ಡ ಮಟ್ಟದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಇಡೀ ಬಸ್​ ಅನ್ನೇ ಸುಟ್ಟು ಕರಕಲು ಮಾಡಿದೆ.

ಸದ್ಯ ಬೆಂಕಿ ಕಾಣಿಸಿದ ತಕ್ಷಣವೇ ಪ್ರಯಾಣಿಕರೆಲ್ಲರೂ ಬಸ್​ನಿಂದ ಹೊರ ಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಖಾಸಗಿ ಬಸ್ ನಡು ರಸ್ತೆಯಲ್ಲೆ ಧಗ ಧಗ ಉರಿದಿದೆ. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಚಿತ್ರದುರ್ಗ ಎಸ್​​ಪಿ ರಂಜಿತ್ ಕುಮಾರ್ ಬಂಡಾರೂ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.