ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ‘ಏರ್ ಇಂಡಿಯಾ’ ವಿಮಾನದ ಪೈಲಟ್ ಆರೋಗ್ಯದಲ್ಲಿ ಏರುಪೇರು…

ನವದೆಹಲಿ: ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸಬೇಕಿದ್ದ ಏರ್ ಇಂಡಿಯಾ ವಿಮಾನದ (ಎಐ – 2414) ಪೈಟಲ್ ಒಬ್ಬರಿಗೆ ಹಠಾತ್ತಾಗಿ ಆರೋಗ್ಯದಲ್ಲಿ ಏರುಪೇರು ಸಂಭವಿಸಿ, ಅವರು ವಿಮಾನ ಚಲಾಯಿಸಲಾರದಂಥ ಸ್ಥಿತಿ ತಲುಪಿದ ಘಟನೆ (ಜುಲೈ 4) ರ ಬೆಳಗಿನ ಜಾವ ನಡೆದಿದೆ. ವಿಮಾನ ಹೊರಡುವುದಕ್ಕೆ ಕೆಲವೇ ನಿಮಿಷಗಳ ಮುಂದೆ ಹೀಗಾಗಿದ್ದು, ಕೂಡಲೇ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದ ಬಳಿಯಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆನಂತರ, ಏರ್ ಇಂಡಿಯಾ ವಿಮಾನವಾದ ಎಐ – 2414 ವಿಮಾನಕ್ಕೆ ಅವರ ಬದಲು ಮತ್ತೊಬ್ಬ ಪೈಲಟ್ ಅವರನ್ನು ನೇಮಿಸಿ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ, ಈ ಪ್ರಕ್ರಿಯೆಗಳೆಲ್ಲಾ ಮುಗಿಯಲು ಸಮಯ ಹಿಡಿದಿದ್ದರಿಂದಾಗಿ ದೆಹಲಿಗೆ ಹೊರಡುವ ವಿಮಾನ ತಡವಾಗಿ ಹೊರಟಿತು.

ಅತ್ತ, ಆಸ್ಪತ್ರೆಯಲ್ಲಿರುವ ಸಹ ಪೈಲಟ್ ಅವರ ಆರೋಗ್ಯ ಸ್ಥಿರವಾಗಿದೆ. ಆದರೂ, ವೈದ್ಯರು ಅವರ ಕಾಳಜಿ ವಹಿಸಿದ್ದಾರೆಂದು ಏರ್ ಇಂಡಿಯಾ ಸಂಸ್ಥೆಯು ತನ್ನ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ. ಅಲ್ಲದೆ, ಪೈಲಟ್ ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸುವುದಾಗಿ ಅದು ತಿಳಿಸಿದೆ.