ಭಾರಿ ಮಳೆ ಹಿನ್ನೆಲೆ; ಕೃಷ್ಣಾ, ತುಂಗಭದ್ರಾ ಜಲಾಶಯಗಳಿಂದ ನದಿಗೆ ನೀರು: ನದಿ ಪಾತ್ರಕ್ಕೆ ತೆರಳದಂತೆ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ

ರಾಯಚೂರು: ಕೃಷ್ಣಾ ಹಾಗೂ ತುಂಗಭದ್ರಾ ಜಲಾಶಯಗಳಿಂದ ನದಿಗೆ ನೀರು ಬಿಡಲಾಗುತ್ತಿದ್ದು, ರಾಯಚೂರು ಜಿಲ್ಲೆಗೆ ಪ್ರವಾಹ ಭೀತಿ ಎದುರಾಗಿದೆ. ತ್ರಿವಳಿ ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, ಹೆಚ್ಚುವರಿ ನೀರನ್ನು ತುಂಗಭದ್ರಾ ನದಿಗೆ ಹರಿಸಲಾಗುತ್ತದೆ.

ಒಳಹರಿವಿನ ಪ್ರಮಾಣದಲ್ಲಿ ಭಾರಿ ಏರಿಕೆ: ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಇಂದು ಬೆಳಗ್ಗೆ 8 ಗಂಟೆಗೆ 1,624.80 ಅಡಿ ಆಗಿದ್ದು, 75,837 ಟಿಎಂಸಿ ಸಾಮರ್ಥ್ಯ ಹೊಂದಿದೆ. ಜಲಾಶಯದ ಒಟ್ಟು ಸಂಗ್ರಹಣಾ ಸಾಮರ್ಥ್ಯ 105.788 ಟಿಎಂಸಿ ಆಗಿದ್ದು, 1,633 ಅಡಿ ಹೊಂದಿದೆ. ಜಲಾಶಯಕ್ಕೆ ಪ್ರಸ್ತುತ ಒಳಹರಿವು ಸುಮಾರು 35,052 ಕ್ಯೂಸೆಕ್ಸ್ ಆಗಿದೆ. ತುಂಗಾ ಮತ್ತು ಭದ್ರಾ ಅಣೆಕಟ್ಟುಗಳಿಂದ ನೀರು ಬಿಡುಗಡೆ, ವರದಾ ನದಿಯ ನೀರು ಮತ್ತು ತುಂಗಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದುರಿಂದ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.

ನೀರಿನ ಒಳಹರಿವು ಗಮನದಲ್ಲಿಟ್ಟುಕೊಂಡು ನದಿ ನೀರು: ಹೀಗಾಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣವನ್ನು ಅವಲಂಬಿಸಿ ಇಂದು ಬೆಳಗ್ಗೆ 11 ಗಂಟೆಯಿಂದ ನದಿಗೆ ನೀರು ಬಿಡಲಾಗುತ್ತದೆ. ಸುಮಾರು 60 ಸಾವಿರದಿಂದ ದಿಂದ 85 ಸಾವಿರ ಕ್ಯೂಸೆಕ್ಸ್ ವರೆಗೆ ನೀರಿನ್ನು ನದಿಗೆ ಹರಿಸುವ ಸಾಧ್ಯತೆ ಇದೆ. ಆದ್ದರಿಂದ ತುಂಗಭದ್ರಾ ನದಿಯ ಕೆಳಭಾಗದ ಹಳ್ಳಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಜಲಾಶಯದ ಅಧಿಕಾರಿಗಳು ಆಯಾ ಜಿಲ್ಲಾಡಳಿತಕ್ಕೆ ಸಂದೇಶ ರವಾನಿಸಿದ್ದಾರೆ.

ಮತ್ತೊಂದೆಡೆ, ಜಿಲ್ಲೆಯ ಬಲ ಭಾಗದಲ್ಲಿ ಹರಿಯುತ್ತಿರುವ ನಾರಾಯಣಪುರ ಡ್ಯಾಂಗೆ ನೀರಿನ ಒಳಹರಿವು ಹೆಚ್ಚಾಗಿದೆ. ಇಂದು ಬೆಳಗ್ಗೆ 8 ಗಂಟೆಗೆ ಜಲಾಶಯದ ನೀರಿನ ಮಟ್ಟ 490.70 ಮೀಟರ್ ಇದ್ದು, 1 ಕ್ಯೂಸೆಕ್ ಒಳಹರಿವು ಇದೆ. ಡ್ಯಾಂನ ಹೆಚ್ಚುವರಿ ನೀರನ್ನು 30 ಗೇಟ್‌ಗಳ ಮೂಲಕ 95,265 ಕ್ಯೂಸೆಕ್ಸ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ.

ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ನದಿ ಪಾತ್ರದ ಜನರಿಗೆ ಸೂಚನೆ: ಸಾವಿರಾರು ಕ್ಯೂಸೆಕ್ ನೀರು ಹರಿಬಿಡಲಾಗುತ್ತಿರುವುದರಿಂದ ಕೃಷ್ಣಾ ನದಿ ತೀರದ ತಾಲೂಕುಗಳಾದ ಲಿಂಗಸೂಗೂರು, ದೇವದುರ್ಗ, ರಾಯಚೂರು ಹಾಗೂ ತುಂಗಭದ್ರಾ ನದಿ ಕೆಳಭಾಗದ ಸಿಂಧನೂರು, ಮಾನವಿ, ರಾಯಚೂರು ತಾಲೂಕಿನ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ನದಿ ಪಾತ್ರಕ್ಕೆ ತೆರಳದಂತೆ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.