ಶುದ್ಧ ನೀರಿನ ಘಟಕಗಳ ಕಾಮಗಾರಿ ಪೂರ್ಣಗೊಂಡರೂ ಎರಡು ವರ್ಷದಿಂದ ಕಾರ್ಯಾರಂಭ ಮಾಡಿಲ್ಲ;  -ಸ್ಥಳೀಯರ ಪರದಾಟ

ಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಪ್ರತಿ ಘಟಕಕ್ಕೂ 11 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಈ ಘಟಕಗಳಲ್ಲಿ ಐದು ರೂಪಾಯಿ ನೀಡಿದರೆ 20 ಲೀಟರ್ ಶುದ್ಧ ಕುಡಿಯುವ‌ ನೀರು ಸಿಗುವ ಸೌಲಭ್ಯ ಕಲ್ಪಿಸಲಾಗಿದೆ‌.

ಆದರೆ, ಆರು ಘಟಕಗಳಲ್ಲಿ ಕೇವಲ ನಾಲ್ಕು ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಉಳಿದ ಎರಡು ಘಟಕಗಳ ಕಾಮಗಾರಿ ಪೂರ್ಣಗೊಂಡರೂ ಸಹ ಎರಡು ವರ್ಷದಿಂದ ಕಾರ್ಯಾರಂಭ ಮಾಡಿಲ್ಲ. ಈ ಕುರಿತು ಹಲವು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಹಾವೇರಿ ನಗರಸಭೆ ಈ ಘಟಕಗಳಿಗೆ ನೀರು ಪೂರೈಸುತ್ತಿಲ್ಲ. ಹೀಗಾಗಿ ಘಟಕಗಳು ಕಾರ್ಯಾರಂಭ ಮಾಡಿಲ್ಲ ಎನ್ನುತ್ತಾರೆ ಸ್ಥಳೀಯರು. ನಗರಸಭೆ ಕೇಳಿದರೆ ಅವರು ಗ್ರಾಮೀಣ ಭಾಗಕ್ಕೆ ನೀರು ಪೂರೈಕೆ ಮಾಡುವವರನ್ನು ಕೇಳಿ ಎನ್ನುತ್ತಿದ್ದಾರೆ. ಮತ್ತೊಂದೆಡೆ, ಗ್ರಾಮೀಣ ಭಾಗಕ್ಕೆ ನೀರು ಪೂರೈಕೆ ಮಾಡುವ ಅಧಿಕಾರಿಗಳು ನಗರಸಭೆ ನೀರು ಪೂರೈಕೆ ಮಾಡಬೇಕು ಎನ್ನುತ್ತಾರೆ. ಇವರಿಬ್ಬರ ಜಗಳದಲ್ಲಿ ಶಿವಲಿಂಗನಗರ ಮತ್ತು ವೈಷ್ಣೋದೇವಿ ಪಾರ್ಕ್​ ನಿವಾಸಿಗಳು ಶುದ್ಧ ಕುಡಿಯುವ ನೀರಿಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಿದೆ‌.

ನಮಗೆ ಶುದ್ಧ ಕುಡಿವ ನೀರು ಒದಗಿಸಿಕೊಡಿ: ತಮ್ಮ ಏರಿಯಾದಲ್ಲಿ ಘಟಕಗಳಿದ್ದರೂ ಕಾರ್ಯಾರಂಭ ಮಾಡದೇ ಇರುವ ಕಾರಣ ದೂರದ ಘಟಕಗಳಿಗೆ ಹೋಗುವ ಅನಿವಾರ್ಯತೆ ಇದೆ. ಅಲ್ಲದೇ ಟಿಡಿಎಸ್ ಹೆಚ್ಚು ಇರುವ ನೀರು ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಸಭೆಯವರೇ ಈ ಘಟಕಗಳಿಗೆ ನೀರು ಪೂರೈಸಬೇಕು ಎಂದು ಗ್ರಾಮೀಣ ಭಾಗದ ನೀರು ಪೂರೈಕೆ ಸಿಬ್ಬಂದಿ ತಿಳಿಸುತ್ತಾರೆ. ಆದರೆ, ನಗರಸಭೆಯವರನ್ನ ಕೇಳಿದರೆ ಅವರು ಗುತ್ತಿಗೆದಾರರೇ ಪೈಪ್​ಲೈನ್ ಹಾಕಿ ಶುದ್ಧ ಕುಡಿಯುವ ನೀರು ಪೂರೈಸಬೇಕು ಎನ್ನುತ್ತಿದ್ದಾರೆ. ಈ ಎರಡು ಕಡೆ ನಾಗರಿಕರು ಅಲೆದು ಅಲೆದು ಸಾಕಾಗಿದೆ. ಆದಷ್ಟು ಬೇಗ ಈ ಘಟಕಗಳಿಗೆ ನೀರು ಪೂರೈಸಬೇಕು. ಇದರಿಂದ 1000 ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಕೇವಲ 5 ರೂಪಾಯಿಗೆ 20 ಲೀಟರ್ ಸಿಗುತ್ತದೆ‌ ಇಲ್ಲದಿದ್ದರೆ ಈ ನಗರದ ನಿವಾಸಿಗಳು ಹೆಚ್ಚು ಹಣ‌ ಕೊಟ್ಟು ಖಾಸಗಿ ಘಟಕದಿಂದ ನೀರು ತರಬೇಕಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ನಗರಸಭೆ ಮತ್ತು ಗ್ರಾಮೀಣ ಭಾಗದ ನೀರು ಪೂರೈಕೆ ಸಿಬ್ಬಂದಿ ಈ ಕೂಡಲೇ ನೀರಿನ ಘಟಕಗಳಿಗೆ ನೀರು ಪೂರೈಸಬೇಕು. ಇಲ್ಲದಿದ್ದರೆ ಎರಡು ಕಚೇರಿಗಳಿಗೆ ಮುತ್ತಿಗೆ ಹಾಕುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಹಾವೇರಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಮಾತನಾಡಿ, ಈ ಘಟಕಗಳು ಗ್ರಾಮೀಣ ನೀರು ಪೂರೈಕೆ ಕಚೇರಿಗೆ ಸಂಬಂಧಿಸಿರುತ್ತವೆ. ಅವರು ಈ ಘಟಕಗಳಿಗೆ ನೀರು ಪೂರೈಸಬೇಕು. ಆದರೆ, ಇಲ್ಲಿ ಗುತ್ತಿಗೆದಾರ ಈ ಕೆಲಸಮಾಡಿಲ್ಲ.‌ ಅದನ್ನು ನೋಡಿ ಪರಿಶೀಲನೆ ನಡೆಸಿ ಆದಷ್ಟು ಬೇಗ ಈ ಎರಡು ಘಟಕಗಳಲ್ಲಿ ಶುದ್ಧ ಕುಡಿಯುವ ನೀರು ಸಿಗುವಂತೆ ಮಾಡುವುದಾಗಿ ತಿಳಿಸಿದ್ದಾರೆ.

ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವಂತೆ ಇಲ್ಲಿ ಗ್ರಾಮೀಣ ಭಾಗದ ನೀರು ಪೂರೈಕೆ ಸಿಬ್ಬಂದಿ ಮತ್ತು ನಗರಸಭೆಯ ತಿಕ್ಕಾಟದಲ್ಲಿ ನಗರದ ಜನರು ಶುದ್ಧ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಇನ್ನು ಎರಡು ವರ್ಷದಿಂದ ಘಟಕ ಉಪಯೋಗಿಸದ ಕಾರಣ ಘಟಕದ ಯಂತ್ರೋಪಕರಣಗಳು ಹಾಳಾಗಲಾರಂಭಿಸಿವೆ. ಘಟಕದ ಉಪಕರಣಗಳು ಹಾಳಾಗುವ ಮುನ್ನ ಘಟಕಕ್ಕೆ ನೀರು ಪೂರೈಸಿ ಶುದ್ಧ ಕುಡಿಯುವ ನೀರು ಸಿಗುವಂತೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.