“ಅಡಕೆ ಟೋಕಾಳಿ ಉತ್ಪನ್ನಗಳನ್ನ ನಿಷೇಧಿಸಿದ ಅಮೆರಿಕ”

ಹಾವೇರಿ : ಕಳೆದ ಮೂರು ದಶಕಗಳಿಂದ ಅಡಕೆ ಟೋಕಾಳಿಯಿಂದ ವಿವಿಧ ಉತ್ಪನ್ನಗಳ ತಯಾರಿಕೆ ಉದ್ಯಮದ ರೂಪ ಪಡೆಯಿತು. ಅಡಕೆ ಟೋಕಾಳಿಯಲ್ಲಿ ಊಟದ ಪ್ಲೇಟ್, ತಟ್ಟೆ, ಚಮಚ ಸೇರಿದಂತೆ ವಿವಿಧ ರೂಪದ ಉತ್ಪನ್ನಗಳನ್ನ ತಯಾರಿಸಲಾಗುತ್ತದೆ. ನೂರಕ್ಕೆ ನೂರರಷ್ಟು ಪ್ರಕೃತಿಯಲ್ಲಿ ಕರಗುವ ಅಡಕೆ ಟೋಕಾಳಿ ಉತ್ಪನ್ನಗಳಿಗೆ ಎಲ್ಲಿಲ್ಲದ ಬೇಡಿಕೆ ಬಂತು. ಅಡಕೆ ಹೆಚ್ಚು ಬೆಳೆಯುವ ಆಂಧ್ರಪ್ರದೇಶ, ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸಾವಿರಾರು ಉದ್ಯಮಿದಾರರು ಈ ಉತ್ಪನ್ನಗಳಿಗೆ ಯಂತ್ರಗಳ ಸಹಾಯ ಪಡೆದು ಹೆಚ್ಚು ಹೆಚ್ಚು ರಪ್ತು ಮಾಡಲಾರಂಭಿಸಿದ್ದರು. ಆದರೀಗ ಇದರಲ್ಲಿ ಕ್ಯಾನ್ಸರಕಾರಕ ಅಂಶವಿದೆ ಎಂದು ಅಮೆರಿಕ ಭಾರತದ ಅಡಕೆ ಟೋಕಾಳಿಯ ತಟ್ಟೆ, ಪ್ಲೇಟ್, ಚಮಚ ಸೇರಿದಂತೆ ವಿವಿಧ ಉತ್ಪನ್ನಗಳನ್ನು ನಿಷೇಧ ಮಾಡಿದೆ.

ನೂರಕ್ಕೆ ನೂರರಷ್ಟು ಪರಿಸರ ಪ್ರೇಮಿಯಾಗಿರುವ ಈ ಅಡಕೆ ತಟ್ಟೆ ಪ್ಲೇಟ್ ಚಮಚಗಳಿಗೆ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಬಹುಬೇಡಿಕೆ ಬಂತು. ಅದರಲ್ಲಿ ಸಾವಿರಾರು ಉದ್ಯಮಿದಾರರು ಲಕ್ಷಾಂತರ ಕಾರ್ಮಿಕರು ಈ ಉದ್ಯಮದಿಂದಲೇ ಜೀವನ ಕಟ್ಟಿಕೊಂಡಿದ್ದರು. ಅಮೆರಿಕ, ಪ್ರಾನ್ಸ್, ಇಂಗ್ಲೆಂಡ್ ಸೇರಿದಂತೆ ಪಾಶ್ಚಾತ್ಯ ದೇಶಗಳಲ್ಲಿ ಸಹ ಈ ಉತ್ಪನ್ನಗಳಿಗೆ ಬೇಡಿಕೆ ಬಂತು. ಆದರೆ, ಇದೀಗ ಅಮೆರಿಕ ಭಾರತದ ಅಡಕೆ ಟೋಕಾಳಿಯ ತಟ್ಟೆ, ಪ್ಲೇಟ್, ಚಮಚ ಸೇರಿದಂತೆ ವಿವಿಧ ಉತ್ಪನ್ನಗಳಿಗೆ ನಿಷೇಧ ಹೇರಿದೆ.

ಆರೋಗ್ಯ, ಔಷಧೀಯ ಇಲಾಖೆ ವರದಿಯಿಂದ ಈ ನಿಷೇಧ: ‘ಅಮೆರಿಕದ ಆರೋಗ್ಯ ಇಲಾಖೆ ಅಡಿ ಬರುವ ಆಹಾರ ಮತ್ತು ಔಷಧೀಯ ಸಂಸ್ಥೆಯ ವರದಿಯಿಂದ ಈ ನಿಷೇಧ ಜಾರಿಗೆಯಾಗಿದೆ. ಭಾರತದಿಂದ ಬರುವ ಅಡಿಕೆ ತಟ್ಟೆಗಳಲ್ಲಿ ಆಲ್ಕೋಹಾಡ್ ಎಂಬ ವೈರಾಣು ಉತ್ಪಾದನೆಯಾಗುತ್ತದೆ. ಅದರಿಂದ ಕ್ಯಾನ್ಸರ್ ಬರುತ್ತದೆ ಎಂದು ಆಹಾರ ಮತ್ತು ಔಷಧೀಯ ಸಂಸ್ಥೆ ಎಚ್ಚರಿಕೆ ನೀಡಿದೆ. ಈ ನಿರ್ಧಾರ ಅಡಕೆ ಉತ್ಪನ್ನಗಳ ಉದ್ಯಮಿದಾರರಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ. ತೀವ್ರ ಚೇತರಿಕೆಯಲ್ಲಿ ಸಾಗುತ್ತಿದ್ದ ಉದ್ಯಮಕ್ಕೆ ಇನ್ನಿಲ್ಲದ ಹಾನಿ ತಂದಿದೆ’ ಎನ್ನುತ್ತಾರೆ ಹಾವೇರಿ ಅಡಕೆ ಟೋಕಾಳಿ ಉತ್ಪನ್ನಗಳ ಉದ್ಯಮಿ ಪ್ರವೀಣ ಪೂಜಾರ.

ಕೋಟ್ಯಂತರ ರೂ. ಬಂಡವಾಳ ಹೂಡಿ ಉದ್ಯಮ ಸ್ಥಾಪನೆ: ‘ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ಕಾರ್ಖಾನೆ ಆರಂಭಿಸಿದ್ದೇವೆ. ಅಲ್ಲದೆ ಲಕ್ಷಾಂತರ ರೂಪಾಯಿ ಅಡಕೆ ಟೋಕಾಳಿ ಖರೀದಿಸಿದ್ದೇವೆ. ಅಮೆರಿಕಕ್ಕೆ ರಫ್ತಾಗಲು 5 ಲಕ್ಷ ರೂಪಾಯಿಗೂ ಅಧಿಕ ರೂಪಾಯಿಗಳ ಉತ್ಪನ್ನಗಳು ಸಿದ್ದವಾಗಿವೆ. ನಮ್ಮನ್ನೇ ನಂಬಿ ನಿತ್ಯ 12 ಕ್ಕೂ ಅಧಿಕ ಜನರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಈ ಕೆಲಸ ಬಿಟ್ಟು ಬೇರೆ ಕೆಲಸ ಬರುವುದಿಲ್ಲ, ಇವರೆಲ್ಲಾ ಎಲ್ಲಿಗೆ ಹೋಗಬೇಕು?’ ಎಂದಿದ್ದಾರೆ.

‘ಭಾರತದಲ್ಲಿ ಯುಐ ಟ್ರೀಟ್ ಎನ್ನುವ ಟ್ರೀಟ್‌ಮೆಂಟ್‌ಗೆ ಒಳಪಡಿಸಲಾಗುತ್ತದೆ. ಇದರಿಂದ ಅಡಕೆ ತಟ್ಟೆಗಳಲ್ಲಿರುವ ಎಲ್ಲ ರೀತಿಯ ವೈರಾಣು ತೆಗೆದುಹಾಕಲಾಗುತ್ತದೆ. ಇದರಿಂದ ಯಾವುದೇ ರೀತಿಯ ರೋಗಗಳು ಬರುವುದಿಲ್ಲ. ಇಷ್ಟೆಲ್ಲ ಮುಂಜಾಗ್ರತೆಯಿಂದ ಅಡಕೆ ತಟ್ಟೆ ಉತ್ಪಾದನೆ ಮಾಡಿದರೂ ಸಹ ಅಮೆರಿಕ ಸರ್ಕಾರ ಏಕೆ ಈ ನಿರ್ಧಾರ ಕೈಗೊಂಡಿದೆ ಎನ್ನುವುದು ಗೊತ್ತಾಗುತ್ತಿಲ್ಲ’ ಎಂದು ಹೇಳಿದ್ದಾರೆ.

‘ಅಮೆರಿಕದ ಈ ನಿರ್ಧಾರದಿಂದ ಉಳಿದ ರಾಷ್ಟ್ರಗಳು ಸಹ ಭಾರತದಲ್ಲಿ ತಯಾರಿಸುವ ಅಡಕೆ ಗಿಡದ ಟೋಕಾಳಿಯ ಉತ್ಪನ್ನಗಳನ್ನು ನಿಷೇಧಿಸಿವೆ. ಇದರಿಂದ ನಾವು ಬೀದಿಗೆ ಬಂದಿದ್ದೇವೆ. ಕೇಂದ್ರ ಸರ್ಕಾರ ನಮ್ಮ ನೆರವಿಗೆ ಬರಬೇಕು. ಆದಷ್ಟು ಬೇಗ ಕೇಂದ್ರ ಸರ್ಕಾರ ಈ ಕುರಿತಂತೆ ಅಮೆರಿಕಕ್ಕೆ ಮನವರಿಕೆ ಮಾಡಬೇಕು. ನಾವು ಯಾವ ಪರೀಕ್ಷೆಗಾದರೂ ಸಿದ್ಧವಿದ್ದೇವೆ’ ಎಂದಿದ್ದಾರೆ.

ಈ ಕುರಿತು ಕಾರ್ಮಿಕರಾದ ರೂಪಾ ಎಂಬುವರು ಮಾತನಾಡಿದ್ದು, ‘ಪ್ರವೀಣ್ ಅವರ ಕಾರ್ಖಾನೆಯಲ್ಲಿ 12ಕ್ಕೂ ಹೆಚ್ಚು ಜನ ಕಾರ್ಮಿಕರು ಕೆಲಸ ಮಾಡುತ್ತಾರೆ. ಅಮೆರಿಕ ಈ ರೀತಿ ನಿಷೇಧ ಹೇರಿದ ನಂತರ ಕಾರ್ಖಾನೆ ಆರಂಭವಾಗಿಲ್ಲ, ಕೂಲಿಕಾರ್ಮಿಕರಿಗೆ ಕೆಲಸ ಇಲ್ಲ. ಈ ಕೆಲಸ ಬಿಟ್ಟು ನಮಗೆ ಬೇರೆ ಕೆಲಸ ಗೊತ್ತಿಲ್ಲ, ನಾವು ಎಲ್ಲಿಗೆ ಹೋಗಬೇಕು’ ಎಂದು ಅಳಲು ತೋಡಿಕೊಂಡಿದ್ದಾರೆ.

‘ಅಮೆರಿಕದ ನಿಷೇಧದಿಂದ ನಮಗೆ ಸಂಕಷ್ಟ ಎದುರಾಗಿದೆ. ಕಾರ್ಖಾನೆಯಲ್ಲಿ ದುಡಿದು ಹೇಗೋ ಜೀವನ ಸಾಗಿಸುತ್ತಿದ್ದೆವು. ಆದರೆ, ಈಗ ಕಾರ್ಖಾನೆ ಬಂದಾಗಿರುವುದರಿಂದಾಗಿ ದಿನದ ತುತ್ತಿಗೂ ತತ್ವಾರ ತಂದಿದೆ’ ಎಂದು ಹೇಳಿದ್ದಾರೆ.