ಬೆಂಗಳೂರು: ವೈದ್ಯಕೀಯ ಆರೈಕೆ ಪಾವಿತ್ರ್ಯತೆಯನ್ನು ಉಲ್ಲಂಘಿಸಿದಲ್ಲಿ ವೈದ್ಯಕೀಯ ಲೋಪ ಮಾತ್ರವಲ್ಲದೆ, ಮನುಷ್ಯನ ಜೀವನದ ಅಂತರ್ಗತ ಘನತೆಯನ್ನು ಅಪವಿತ್ರಗೊಳಿಸಿದಂತಾಗಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ರೋಗಿಯೊಬ್ಬರ ಅನುಮತಿ ಪಡೆಯದೆ, ಶಸ್ತ್ರಚಿಕಿತ್ಸೆ ಮಾಡಿದ ಇಬ್ಬರು ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ.

ವೈದ್ಯಕೀಯ ನಿರ್ಲಕ್ಷ್ಯದಿಂದ ತನ್ನ ತಂದೆಯ ಸಾವಿಗೆ ಕಾರಣರಾದ ವೈದ್ಯರ ವಿರುದ್ಧ ತನಿಖೆಗೆ ಆದೇಶಿಸಲು ಕೋರಿ ಮೃತರ ಮಗ ವಿಕಾಸ್ ಎಂ. ದೇವ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ವಿಧಿಯಿಂದಲ್ಲದೆ, ವೈಫಲ್ಯದಿಂದ ವ್ಯಕ್ತಿಯೊಬ್ಬರ ಘನತೆಯಿಂದ ಬದುಕುವ ಹಕ್ಕು ನಾಶವಾಗಿದೆ. ಇಂತಹ ಸಂದರ್ಭದಲ್ಲಿ ತಂದೆಯನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ತನಿಖೆಗಾಗಿ ನ್ಯಾಯಾಲಯದ ಮೊರೆ ಹೋದಾಗ ಅವರಿಗೆ ಪರಿಹಾರ ನೀಡದೆ ಹಿಂದಿರುಗಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಅಲ್ಲದೆ, ಘಟನೆ ಸಂಬಂಧ ರಾಜ್ಯ ಸರ್ಕಾರ ಮತ್ತು ಆಸ್ಪತ್ರೆ ರಚಿಸಿದ್ದ ವೈದ್ಯಕೀಯ ಸಮಿತಿಯ ವರದಿಯಲ್ಲಿ, ತೂರುನಳಿಕೆ ಅಳವಡಿಕೆಯಿಂದ ಹಿಮೋಪ್ನ್ಯೂಮೋಥೊರಾಕ್ಸ್ ಆಗಿದ್ದು, ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿದ್ದರೆ ಸುಧಾರಣೆಯಾಗುತ್ತಿತ್ತು ಎಂದು ಹೈಕೋರ್ಟ್ ಹೇಳಿದೆ.
ತಪ್ಪಾಗಿ ಎಡಭಾಗಕ್ಕೆ ಕ್ಯಾತಿಟರ್ ಇರಿಸಲಾಗಿದೆ ಎಂಬುದಾಗಿ ವೈದ್ಯಕೀಯ ಸಮಿತಿ ನೀಡಿದ ವರದಿಯಲ್ಲಿ ಗೊತ್ತಾಗಿದೆ. ಇದು ವೈದ್ಯರ ಗಂಭೀರ ದೋಷವಾಗಿದೆ. ತಪ್ಪಾದ ಅಳವಡಿಕೆ ತೀವ್ರ ರಕ್ತಸ್ರಾವ, ಕಡಿಮೆ ರಕ್ತದೊತ್ತಡ, ಉಸಿರಾಟದ ತೊಂದರೆಗಳಿಗೆ ಕಾರಣವಾಗಿದೆ. ವೈದ್ಯರು ಸರಿಯಾದ ರೀತಿಯಲ್ಲಿ ಕಾಳಜಿ ತೋರಿದ್ದರೆ, ಇದನ್ನು ತಪ್ಪಿಸುವುದಕ್ಕೆ ಅವಕಾಶವಿತ್ತು ಎಂಬುದಾಗಿ ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಪ್ರಕರಣದ ಹಿನ್ನೆಲೆ: ನಾಗರಬಾವಿಯ ನಿವಾಸಿ ವಿಕಾಸ್ ಎಂ ದೇವ್ ಎಂಬವರ ತಂದೆ ಮಹಾದೇವ ಅವರಿಗೆ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿತ್ತು. 2024ರ ಪೆಬ್ರವರಿ 19ರಂದು ಡಯಾಲಿಸಿಸ್‌ಗಾಗಿ ಜೆಎಂ ಆಸ್ಪತ್ರೆಯ ಡಾ.ವೀರಭದ್ರ ಗುಪ್ತಾ ಅವರ ಬಳಿ ಆಗಮಿಸಿದ್ದರು. ಅವರು ಹೆಚ್‌ಡಿ ಕ್ಯಾತಿಟರ್ ಅಳವಡಿಕೆಗೆ ಆಗಮಿಸಿದ್ದರು. ಬಳಿಕ ಮಾರ್ಚ್ 29ರಂದು ನಡೆದ ವೈದ್ಯಕೀಯ ಪರೀಕ್ಷೆಯ ಸಂದರ್ಭದಲ್ಲಿ ಈಗಾಗಲೇ ಇದ್ದಂತಹ ಎಚ್‌ಡಿ ಕ್ಯಾತಿಟರ್ ಬದಲಾಗಿ ಪೆರ್ಮಾ ಕ್ಯಾತಿಟರ್‌ನೊಂದಿಗೆ ಬದಲಾಯಿಸುವುದಕ್ಕೆ ಸೂಚಿಸಲಾಗಿತ್ತು. ಇದಕ್ಕಾಗಿ ಮಹದೇವ ಅವರನ್ನು ಜೆಎಂ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗಾಗಿ ಡಾ.ಕೆ.ಬಿ. ಸುಮಂತ್ ರಾಜ್ ಅವರಲ್ಲಿ ತೋರಿಸಲು ಸೂಚಿಸಲಾಗಿತ್ತು. ಏಪ್ರಿಲ್ 1ರಂದು ಪರೀಕ್ಷಿಸಿದ್ದ ಡಾ.ಸುಮಂತ್ ರಾಜ್, ಏಪ್ರಿಲ್ 4 ರಂದು ಶಸ್ತ್ರಚಿಕಿತ್ಸೆಗಾಗಿ ದಿನಾಂಕ ನಿಗದಿ ಪಡಿಸಿದ್ದರು. ಈ ವೇಳೆ ಬಲಭಾಗದ ಪರ್ಮಾ ಕ್ಯಾತಿಟರ್ ಅಳವಡಿಕೆಗೆ ವಿಕಾಸ್ ಒಪ್ಪಿಗೆ ನೀಡಿದ್ದರು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಸುಮಾರು 30 ನಿಮಿಷಗಳ ಕಾಲ ಶಸ್ತ್ರಚಿಕಿತ್ಸೆ ನಡೆಸುವುದಾಗಿ ಭರವಸೆ ನೀಡಿದ್ದ ವೈದ್ಯರು, ನಾಲ್ಕು ತಾಸು ಶಸ್ತ್ರಚಿಕಿತ್ಸೆ ನಡೆಸಿದ್ದರು. ಅಲ್ಲದೆ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡದೆ ಎಡಭಾಗಕ್ಕೆ ಕ್ಯಾತಿಟರ್ ಅಳವಡಿಸಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಮಹದೇವ್ ಅವರಿಗೆ ತೀವ್ರ ನೋವುಪ್ರಾರಂಭವಾಗಿತ್ತು. ಆದರೆ, ಕ್ಯಾತಿಟರ್‌ನಲ್ಲಿ ರಕ್ತದ ಹರಿವು ಕಂಡು ಬಂದಿರಲಿಲ್ಲ. ಅವರ ಆರೋಗ್ಯ ಹದಗೆಟ್ಟ ಕಾರಣ ಅವರನ್ನು ಏಪ್ರಿಲ್ 5ರಂದು ಫೋರ್ಟಿಸ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಈ ವೇಳೆ ಹೃದಯ ಸ್ತಂಭನ ಉಂಟಾಗಿ ಏಪ್ರಿಲ್ 15ರಂದು ಅವರು ಮೃತಪಟ್ಟಿದ್ದರು ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಇದರಿಂದ ಅಸಮಾಧಾನಗೊಂಡಿದ್ದ ಮೃತರ ಮಗ ವಿಕಾಸ್, ಎರಡು ಆಸ್ಪತ್ರೆಗಳಲ್ಲಿನ ವೈದ್ಯರ ನಿರ್ಲಕ್ಷ್ಯ ಮತ್ತು ಅನಧಿಕೃತ ಕಾರ್ಯವಿಧಾನ, ಅನುಮತಿ ಇಲ್ಲದೆ ಶಸ್ತ್ರಸಿಕಿತ್ಸೆ ನಡೆಸಿದ ಪರಿಣಾಮ ತನ್ನ ತಂದೆ ಮೃತರಾಗಿದ್ದಾರೆ. ಹೀಗಾಗಿ, ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ಧ ಕ್ರಮಕ್ಕೆ ಆದೇಶಿಸಬೇಕು ಎಂದು ಕೋರಿದ್ದರು.


