ನಾಟಿಂಗ್‌ಹ್ಯಾಮ್: ಟೀಂ ಇಂಡಿಯಾ ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧನಾ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಶತಕ ಸಿಡಿಸಿ ಭಾರತದ ಪರ ಹಲವು ದಾಖಲೆ ನಿರ್ಮಿಸಿದ್ದಾರೆ.

ಟಿ20, ಏಕದಿನ, ಟೆಸ್ಟ್ನಲ್ಲಿ ಶತಕ ಬಾರಿಸಿದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಂಧನಾ ಪಾತ್ರರಾಗಿದ್ದಾರೆ. ವಿಶ್ವ ಮಹಿಳಾ ಕ್ರಿಕೆಟ್ನಲ್ಲಿ ಮೂರು ಮಾದರಿಯ ಕ್ರಿಕೆಟಿನಲ್ಲಿ ಸೆಂಚುರಿ ಬಾರಿಸಿದ 5ನೇ ಆಟಗಾರ್ತಿಯಾಗಿದ್ದಾರೆ.
ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ಟಿ20ಯಲ್ಲಿ ಶತಕ ಬಾರಿಸಿದ ಮೊದಲ ಮಹಿಳಾ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಮಂಧನಾ ಹೊಡೆದ ಶತಕ ಭಾರತದ ಪರ ದಾಖಲಾದ ಎರಡನೇ ಟಿ20 ಶತಕವಾಗಿದೆ. ಈ ಮೊದಲು ಹರ್ಮನ್ಪ್ರೀತ್ ಕೌರ್ ಅವರು ಶತಕ ಬಾರಿಸಿದ್ದರು.
ಇಲ್ಲಿಯವರಗೆ ಸ್ಮೃತಿ ಏಕದಿನದಲ್ಲಿ 11, ಟೆಸ್ಟ್ನಲ್ಲಿ 2 ಹಾಗೂ ಈಗ ಟಿ20ಯಲ್ಲಿ 1 ಶತಕ ಸಿಡಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 5 ವಿಕೆಟ್ ನಷ್ಟಕ್ಕೆ 210 ರನ್ ಹೊಡೆಯಿತು. ಮಂಧನಾ 27 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ 51 ಎಸೆತಗಳಲ್ಲಿ ಶತಕ ಹೊಡೆದರು. ಅಂತಿಮವಾಗಿ ಮಂಧನಾ 112 ರನ್(62 ಎಸೆತ, 15 ಬೌಂಡರಿ, 3 ಸಿಕ್ಸ್ ಸಿಡಿಸಿ) 20ನೇ ಓವರಿನ 2ನೇ ಎಸೆತದಲ್ಲಿ 5ನೇಯವರಾಗಿ ವಿಕೆಟ್ ಒಪ್ಪಿಸಿದರು.
ಕಠಿಣ ಸವಾಲನ್ನು ಬೆನ್ನಟ್ಟಿದ ಇಂಗ್ಲೆಂಡ್ 14.5 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತ 97 ರನ್‌ಗಳ ಭರ್ಜರಿ ಜಯ ಸಾಧಿಸಿತು.

