ರಾಜ್ಯದಲ್ಲಿ ಜು.3ರವರೆಗೂ ಮಳೆ: ಹವಾಮಾನ ಇಲಾಖೆಯು ಕೊಡಗು ಜಿಲ್ಲೆಗೆ ರೆಡ್, 6 ಜಿಲ್ಲೆಗಳಿಗೆ ಆರೆಂಜ್​ ಅಲರ್ಟ್ ಘೋಷಣೆ 

ಬೆಂಗಳೂರು: ರಾಜ್ಯಾದ್ಯಂತ ಮಳೆ ಮುಂದುವರೆದಿದ್ದು, ಜುಲೈ 3ರ ವರೆಗೂ ವರುಣನ ಆರ್ಭಟ ಮುಂದುವರೆಯಲಿದೆ. ರಾಜ್ಯ ಹವಾಮಾನ ಇಲಾಖೆಯು ಕೊಡಗು ಜಿಲ್ಲೆಗೆ ರೆಡ್ ಅಲರ್ಟ್​ ಘೋಷಣೆ ಮಾಡಿದೆ.

ಇನ್ನುಳಿದಂತೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಮತ್ತು ಬೆಳಗಾವಿ, ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಮಳೆ ಮುನ್ಸೂಚನೆ: ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ವಿಜಯನಗರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಮಳೆ: ಶೃಂಗೇರಿ, ಕೊಪ್ಪ, ವಿರಾಜಪೇಟೆ, ಕೊಟ್ಟಿಗೆಹಾರ, ಬೆಳ್ತಂಗಡಿ, ಯಲ್ಲಾಪುರ, ಕ್ಯಾಸಲ್​ರಾಕ್, ಖಾನಾಪುರ, ಸೋಮವಾರಪೇಟೆ, ಪೊನ್ನಂಪೇಟೆ, ಸಿದ್ದಾಫುರ ಹಾಗೂ ಬನವಾಸಿಯಲ್ಲಿ ಶುಕ್ರವಾರ ಭಾರಿ ಮಳೆಯಾಗಿದೆ. ಕಾರ್ಕಳ, ಬಂಟವಾಳ, ಸುಳ್ಯ, ಗೇರುಸೊಪ್ಪ, ಹೊನ್ನಾವರ, ಮಾಣಿ, ಶಕ್ತಿನಗರ, ಕುಂದಾಪುರ, ಮೂಡುಬಿದಿರೆ, ಅಂಕೋಲಾ, ಬೆಳಗಾವಿ, ಆನವಟ್ಟಿ, ಸರಗೂರು, ಅಫ್ಝಲ್​ಪುರ, ಮಂಕಿ, ಹಳಿಯಾಳ, ಮುಂಡಗೋಡು, ಪುತ್ತೂರು, ಉಡುಪಿ, ಗೋಕರ್ಣ, ಶಿರಾಲಿ, ಮಂಗಳೂರು, ಕೋಟಾ, ಬೀದರ್, ಕಿತ್ತೂರು, ಹಾವೇರಿ, ಚಿಂಚೋಳಿ, ಧಾರವಾಡ, ಹುಬ್ಬಳ್ಳಿ, ಹಿರೆಕೆರೂರು, ಕಲಬುರಗಿ, ಗುಬ್ಬಿ, ಜಗಳೂರು, ಭದ್ರಾವತಿ, ಕೋಣನೂರಿನಲ್ಲಿ ಮಳೆಯಾಗಿದೆ.

ಬೆಂಗಳೂರಿನಲ್ಲಿ ಹೇಗಿದೆ ವಾತಾವರಣ: ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಗಾಳಿ ಜೊತೆಗೆ ಆಗಾಗ ಬಿಸಿಲು ಬಂದು ಹೋಗುತ್ತಿದೆ. ಬೆಂಗಳೂರು ನಗರದಲ್ಲಿ 27.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಹಾಗೂ 21.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹೆಚ್​ಎಎಲ್​ನಲ್ಲಿ 27.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಮತ್ತು 20.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 30.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಹಾಗೂ 21.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.