
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭರ್ಜರಿ ಮಳೆಯಾಗುತ್ತಿದೆ. ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಕೆಆರ್‌ಎಸ್ ಡ್ಯಾಂ ಐತಿಹಾಸಿಕ ದಾಖಲೆಯ ಭರ್ತಿಗೆ 1 ಅಡಿಯಷ್ಟೇ ಬಾಕಿ ಇದೆ.
ಈಗಾಗಲೇ ಕೆಆರ್‌ಎಸ್ ಡ್ಯಾಂ 123.25 ಅಡಿ ಭರ್ತಿಯಾಗಿದೆ. 124.80 ಅಡಿ ಗರಿಷ್ಠ ಮಟ್ಟ ಇದ್ದು, ಪೂರ್ಣ ಭರ್ತಿಗೆ ಇನ್ನೊಂದು ಅಡಿಯಷ್ಟೇ ಬಾಕಿ ಉಳಿದಿದೆ.
ಡ್ಯಾಂ ನಿರ್ಮಾಣವಾಗಿ 93 ವರ್ಷಗಳು ಕಳೆದಿವೆ. 93 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಡ್ಯಾಂ ಭರ್ತಿಗೆ ಕಾದುನಿಂತಿದೆ. ಜೂನ್ ತಿಂಗಳಲ್ಲೇ ಅಣೆಕಟ್ಟೆ ಭರ್ತಿಯಾಗಿದ್ದು ಇದೇ ಮೊದಲು ಎನಿಸಲಿದೆ.
ಇಂದು ಕೆಆರ್‌ಎಸ್ ಡ್ಯಾಂಗೆ 73,811 ಕ್ಯೂಸೆಕ್ ಒಳಹರಿವು ಬಂದಿದೆ. ಡ್ಯಾಂನ ಹೊರ ಹರಿವು 38,983 ಕ್ಯೂಸೆಕ್. 47.311 ಟಿಎಂಸಿ ನೀರು ಕೆಆರ್‌ಎಸ್‌ನಲ್ಲಿ ಸಂಗ್ರಹವಾಗಿದೆ. 49.452 ಟಿಎಂಸಿ ಕೆಆರ್‌ಎಸ್ ಗರಿಷ್ಠ ಸಾಮರ್ಥ್ಯ ಇದೆ.
ಇನ್ನು ಎರಡು ಟಿಎಂಸಿ ನೀರಿಗೆ ಕೆಆರ್‌ಎಸ್ ಸಂಪೂರ್ಣ ಭರ್ತಿಯಾಗಲಿದೆ. ಇಂದು ಮಧ್ಯಾಹ್ನದ ವೇಳೆಗೆ ಸಂಪೂರ್ಣ ಭರ್ತಿಯಾಗಲಿದೆ.

