
ಭಟ್ಕಳ : ಇಲ್ಲಿನ ಅಂಜುಮನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಜೀವನದಲ್ಲಿ ಜಿಗುಪ್ಪೆಗೊಂಡು ಡೆತ್ ನೋಟ್ ಬರೆದಿಟ್ಟು ಕಾಲೇಜಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತ ವ್ಯಕ್ತಿ ಮುರುಡೇಶ್ವರದ ತೆರ್ನಮಕ್ಕಿ ನಿವಾಸಿ ಶ್ರೀಧರ ಮಾದೇವ ಮೊಗೇರ (53) ಎಂದು ತಿಳಿದು ಬಂದಿದೆ. ಇವರು ಕಾಲೇಜಿನ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಇವರು ಹಲವಾರು ಬ್ಯಾಂಕುಗಳಲ್ಲಿ ಸಾಲ ಮಾಡಿದ್ದರು. ಅಲ್ಲದೆ, ತಾವು ಕೆಲಸ ಮಾಡುತ್ತಿದ್ದ ಅಂಜುಮನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಡಿಮೆ ಸಂಬಳ ಇರುವುದು ಮತ್ತು ತುಟ್ಟಿ ಭತ್ಯೆ ನೀಡದೇ ಇದ್ದುದ್ದರಿಂದ ಅದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದರು ಎಂದು ಆರೋಪಿಸಲಾಗಿದೆ.
ಮುಂದೆ ಜೀವನ ಮಾಡುವುದು ಕಷ್ಟ ಅಂತಾ ಜೀವನದಲ್ಲಿ ಜಿಗುಪ್ಪೆಗೊಂಡು ಮಂಗಳವಾರ ಸಾಯಂಕಾಲ ೧೬.೩೦ ಗಂಟೆಯಿಂದ ಬುಧವಾರ ಬೆಳಗ್ಗೆ ೯.೪೦ ಗಂಟೆಯ ನಡುವಿನ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಟ್ಕಳ ಶಹರದ ಅಂಜುಮನ್ ಇಂಜಿನಿಯರಿಂಗ್ ಕಾಲೇಜಿನ ಪಿಲ್ಡ್ ಮೆಕ್ಯಾನಿಕಲ್ ಲ್ಯಾಬ್ ಕೊಠಡಿಯಲ್ಲಿ ಸೀಲಿಂಗ್ ಫ್ಯಾನಿಗೆ ನೈಲಾನ್ ವೈಯರನ್ನು ಕಟ್ಟಿಕೊಂಡು ಉರುಳು ಹಾಕಿಕೊಂಡಿದ್ದಾರೆ. ಅವರು ಬರೆದಿರುವ ಡೆತ್ ನೋಟಿನಲ್ಲಿ ಕಾಲೇಜಿನ ಪ್ರಿನ್ಸಿಪಾಲ್, ಮ್ಯಾನೇಜಮೆಂಟ್ ಹಾಗೂ ದಿನೇಶ ಶೇಟ ಹೆಸರು ಉಲ್ಲೇಖ ಮಾಡಿದ್ದರಿಂದ ಅವರ ಸಾವಿನಲ್ಲಿ ಸಂಶಯವಿದೆ. ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಮೃತ ವ್ಯಕ್ತಿಯ ಪತ್ನಿ ದೂರು ನೀಡಿದ್ದಾರೆ.


