ಕಾರವಾರ(ಉತ್ತರ ಕನ್ನಡ): ಮುಂಡಗೋಡ ತಾಲೂಕಿನ ಬೆಡಸಗಾಂವ್ ಗ್ರಾಮದಲ್ಲಿ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. 10ಕ್ಕೂ ಹೆಚ್ಚು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ರಾಮಾಪುರದಿಂದ ಹುಲೆಕಲ್‌ಗೆ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರಿದ್ದ ವಾಹನ ಸಂಚರಿಸುವಾಗ, ಮರ ಮುರಿದು ವಿದ್ಯುತ್ ತಂತಿಗಳ ಮೇಲೆ ಬಿದ್ದಿದೆ. ಪರಿಣಾಮ ವಿದ್ಯುತ್ ಕಂಬವು ಮುರಿದು ವಾಹನದ ಮೇಲೆ ಬಿದ್ದಿದೆ. ಇದಕ್ಕೂ ಮುನ್ನ ಮುಂಜಾಗೃತವಾಗಿ ಬೆಡಸಗಾಂವ್ ಗ್ರಾಮದ ವಿಜಯ ಶಾಂತು ನಾಯ್ಕ ಅವರು ಮರ ಮುರಿದು ಬೀಳುವ ಮುನ್ಸೂಚನೆಯಿಂದ, ಮುಂಚಿತವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು. ಹೀಗಾಗಿ, ವಿದ್ಯುತ್ ಕಂಬ ವಾಹನದ ಮೇಲೆ ಬಿದ್ದರೂ ವಿದ್ಯುತ್ ಪ್ರವಹಿಸದ ಕಾರಣ, ಕಾರ್ಮಿಕರೆಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ.

