
ಬೆಂಗಳೂರು, ಜೂನ್ 21: ಪೈಲಟ್‌ಗಳು ‘ಮೇಡೇ’ ಎಂದು ಘೋಷಿಸಿದ ನಂತರ ಗುವಾಹಟಿ-ಚೆನ್ನೈ ಇಂಡಿಗೋ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿತು ಎಂದು ಮೂಲಗಳು ತಿಳಿಸಿವೆ. ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ಡ್ರೀಮ್‌ಲೈನರ್ ವಿಮಾನವು ಕೆಲವು ದಿನಗಳ ಹಿಂದೆ ಅಹಮದಾಬಾದ್‌ನಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿತ್ತು. ಆ ವೇಳೆ ಕೂಡ ಪೈಲಟ್ ಮೇಡೇ ಘೋಷಿಸಿದ್ದರು. ಆದರೆ, ಅದಕ್ಕೆ ಪ್ರತಿಕ್ರಿಯಿಸುವ ಮುನ್ನ ವಿಮಾನ ಅಪಘಾತಕ್ಕೀಡಾಗಿತ್ತು. ಅದಾದ ಕೇವಲ ಒಂದು ವಾರದ ನಂತರ ಈ ಘಟನೆ ನಡೆದಿದೆ.
ಈ ಘಟನೆ ಗುರುವಾರ ರಾತ್ರಿಯೇ ನಡೆದಿದೆ. ತಡವಾಗಿ ಬೆಳಕಿಗೆ ಬಂದಿದೆ. “ಮೇಡೇ ಕರೆ ಬಂದ ನಂತರ, ಎಟಿಸಿ (ವಾಯು ಸಂಚಾರ ನಿಯಂತ್ರಣ) ವಿಮಾನ ನಿಲ್ದಾಣದ ಸಿಬ್ಬಂದಿಗೆ ಎಚ್ಚರಿಕೆ ನೀಡಿತು, ಅವರು ಕಾರ್ಯಪ್ರವೃತ್ತರಾದರು. ವೈದ್ಯಕೀಯ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿದ್ದರು. ಇಂಡಿಗೋ ವಿಮಾನವು ಗುರುವಾರ ರಾತ್ರಿ 8.20ಕ್ಕೆ ಸುರಕ್ಷಿತವಾಗಿ ಇಳಿಯಿತು” ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಇಂಧನದ ಪರೀಕ್ಷೆ ಮಾಡಿಕೊಳ್ಳದೆ ಹಾರಾಟಕ್ಕೆ ಮುಂದಾಗಿದ್ದಕ್ಕೆ ಆ ವಿಮಾನದ ಇಬ್ಬರಯ ಪೈಲಟ್ಗಳನ್ನೂ ಅಮಾನತುಗೊಳಿಸಲಾಗಿದೆ ಎಂದು ಕೆಲವು ವರದಿಗಳು ತಿಳಿಸಿವೆ. ಆದರೆ, ಇಂಡಿಗೋ ಈ ಬಗ್ಗೆ ಹೇಳಿಕೆ ನೀಡಿಲ್ಲ.
ಇದೇ ರೀತಿ ಶುಕ್ರವಾರ, ಮಧುರೈಗೆ ಹೋಗುತ್ತಿದ್ದ ಇಂಡಿಗೋ ವಿಮಾನವು ಆಕಾಶದಲ್ಲಿ ತಾಂತ್ರಿಕ ದೋಷವನ್ನು ಅನುಭವಿಸಿತು. ಬಳಿಕ ಚೆನ್ನೈಗೆ ಹಿಂತಿರುಗಲು ಮತ್ತು ಲ್ಯಾಂಡ್ ಆಗಲು ಅನುಮತಿ ಕೋರಿತು. ಸುಮಾರು 68 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಸುರಕ್ಷಿತವಾಗಿ ಇಳಿಯಿತು ಮತ್ತು ಎಲ್ಲಾ ಪ್ರಯಾಣಿಕರನ್ನು ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಕೆಳಗಿಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಮೇಡೇ ಕರೆ ಎನ್ನುವುದು ಜೀವಕ್ಕೆ ಅಪಾಯಕಾರಿ ತುರ್ತು ಪರಿಸ್ಥಿತಿಯನ್ನು ತಿಳಿಸಲು ವಾಯುಯಾನ ಮತ್ತು ಸಮುದ್ರ ಕಾರ್ಯಾಚರಣೆಗಳಲ್ಲಿ ಬಳಸಲಾಗುವ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಒಂದು ಸಂಕೇತವಾಗಿದೆ. “ಮೈಡೆಜ್” (“ನನಗೆ ಸಹಾಯ ಮಾಡಿ”) ಎಂಬ ಫ್ರೆಂಚ್ ಪದಗುಚ್ಛದಿಂದ ಇದನ್ನು ಪಡೆಯಲಾಗಿದೆ. ಸ್ಪಷ್ಟತೆ ಮತ್ತು ತಕ್ಷಣದ ಪ್ರತಿಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಇದನ್ನು 3 ಬಾರಿ ಪುನರಾವರ್ತಿಸಲಾಗುತ್ತದೆ. “ಮೇಡೇ, ಮೇಡೇ, ಮೇಡೇ” ಎಂದು ಪೈಲಟ್ ಘೋಷಿಸಿದರೆ ಆ ವಿಮಾನ ಅಪಾಯದಲ್ಲಿದೆ ಎಂದು ಅರ್ಥ. ಸುಳ್ಳು ಅಥವಾ ಸುಮ್ಮನೆ ಮೇಡೇ ಘೋಷಿಸಿದರೆ ಅದನ್ನು ನಿಯಮದ ಗಂಭೀರ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.
