ಬೆಂಗಳೂರು: ಜಾತಿಗಣತಿ ಮಾಡಿ 10 ವರ್ಷ ಆಗಿರುವ ಕಾರಣ ಮರುಗಣತಿಗೆ ಸರ್ಕಾರ ನಿರ್ಧಾರ ಮಾಡಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

ಹೊಸ ಜಾತಿಗಣತಿ ಘೋಷಣೆ ಮಾಡಿರುವ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಹೊಸ ಜಾತಿಗಣತಿ ಬಗ್ಗೆ ಸಿಎಂ ಈಗಾಗಲೇ ಘೋಷಣೆ ಮಾಡಿದ್ದಾರೆ. ಜಾತಿಗಣತಿ ಮಾಡಿ 10 ವರ್ಷ ಆಗಿತ್ತು. ಹಿಂದುಳಿದ ವರ್ಗಗಳ ಆಯೋಗದ ನಿಯಮದಲ್ಲಿ ಪ್ರತಿ 10 ವರ್ಷಕೊಮ್ಮೆ ಗಣತಿ ಮಾಡಬೇಕು ಅಂತಿದೆ. ಹೀಗಾಗಿ ಹೊಸ ಸರ್ವೇಗೆ ನಿರ್ಧಾರ ಮಾಡಲಾಗಿದೆ ಎಂದರು.
ಕೇಂದ್ರ ಸರ್ಕಾರ ಜಾತಿಗಣತಿ ಮಾಡಿದೆ, ಸರ್ಕಾರ ಯಾಕೆ ಜಾತಿಗಣತಿ ಮಾಡುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರ ಕೇವಲ ಜಾತಿಗಣತಿಯನ್ನು ಮಾತ್ರ ಮಾಡುತ್ತದೆ. ಅವರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಮಾಡುವುದಿಲ್ಲ. ನಾವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.
