ಪ್ಯಾರಿಸ್ ಡೈಮಂಡ್ ಲೀಗ್ ಗೆದ್ದ ನೀರಜ್ ಚೋಪ್ರಾ

ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ  ಪ್ಯಾರಿಸ್ ಡೈಮಂಡ್ ಲೀಗ್​ನಲ್ಲಿ ಪ್ರಶಸ್ತಿಗೆ ಮುಡಿಗೇರಿಸಿಕೊಂಡಿದ್ದಾರೆ. ಅದು ಕೂಡ ಜರ್ಮನಿಯ ಚಾಂಪಿಯನ್​ ಜಾವೆಲಿನ್ ಎಸೆತಗಾರ ಜೂಲಿಯನ್ ವೆಬರ್ ಅವರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ. 2023 ರಲ್ಲಿ ಲೌಸಾನ್ನೆ ನಂತರ ಡೈಮಂಡ್ ಲೀಗ್​ನಲ್ಲಿ ಪ್ರಶಸ್ತಿ ಗೆದ್ದಿದ್ದ ನೀರಜ್ ಚೋಪ್ರಾ ಇದೀಗ ಮತ್ತೊಮ್ಮೆ ಡೈಮಂಡ್ ಲೀಗ್​ನಲ್ಲಿ ಎಲ್ಲರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ಯಾರಿಸ್‌ನಲ್ಲಿ ಶುಭಾರಂಭ:

ನೀರಜ್ ಚೋಪ್ರಾ 2025ರ ಮೊದಲ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ವಿಶೇಷ ಎಂದರೆ ನೀರಜ್ ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು 8 ವರ್ಷಗಳ ಬಳಿಕ. ಅಂದರೆ ಕೊನೆಯ ಬಾರಿ ಅವರು ಪ್ಯಾರಿಸ್​ನಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಸ್ಪರ್ಧಿಸಿದ್ದರು.

ಎಂಟು ವರ್ಷಗಳ ಬಳಿಕ ಪ್ಯಾರಿಸ್​ ಡೈಮಂಡ್ ಲೀಗ್​ಗೆ ಮರಳಿದ ನೀರಜ್ ಚೋಪ್ರಾ ಅವರು ತಮ್ಮ ಮೊದಲ ಪ್ರಯತ್ನದಲ್ಲೇ 88.16 ಮೀಟರ್ ಎಸೆತದೊಂದಿಗೆ ಶುಭಾರಂಭ ಮಾಡಿದ್ದರು. ಈ ಎಸೆತವೇ ಇತರ ಸ್ಪರ್ಧಿಗಳಿಗೆ ಗುರಿಯಾಗಿ ಮಾರ್ಪಟ್ಟಿತ್ತು.

ಇತ್ತ ನೀರಜ್ ಚೋಪ್ರಾ ಎರಡನೇ ಪ್ರಯತ್ನದಲ್ಲಿ 85.10 ಮೀಟರ್ ದೂರ ಎಸೆದಿದ್ದರು. ಆದರೆ ಕಠಿಣ ಪ್ರತಿ ಸ್ಪರ್ಧಿ ವೆಬರ್ ಈ ವೇಳೆ 87.88 ಮೀಟರ್ ತಲುಪಿದ್ದರು. ಇದಾದ ಬಳಿಕ ಲಯ ತಪ್ಪಿದ ನೀರಜ್ ಸತತ ಮೂರು ಫೌಲ್ ಎಸೆತಗಳನ್ನು ಎಸೆದರು. ಅತ್ತ ಹವಾಮಾನ ಬದಲಾದಂತೆ, ಇತರ ಸ್ಪರ್ಧಿಗಳಿಗೂ ಥ್ರೋಗಳು ಕಠಿಣವಾದವು.

ಕೈ ಹಿಡಿದ ಮೊದಲ ಎಸೆತ:

ನೀರಜ್ ಚೋಪ್ರಾ ತನ್ನ ಅಂತಿಮ ಪ್ರಯತ್ನದಲ್ಲಿ 82.89 ಮೀಟರ್ ದೂರಕ್ಕೆ  ಎಸೆಯಲಷ್ಟೇ ಶಕ್ತರಾಗಿದ್ದರು. ಇದರ ನಡುವೆ ಮೌರಿಸಿಯೊ ಲೂಯಿಜ್ ಡ ಸಿಲ್ವಾ 86.62 ಮೀಟರ್ ದೂರಕ್ಕೆ ಎಸೆದು ಪೈಪೋಟಿಗೆ ಇಳಿದರು. ಅತ್ತ ಜೂಲಿಯನ್ ವೆಬರ್ ಸತತ ಪ್ರಯತ್ನ ನಡೆಸಿದರೂ, ನೀರಜ್ ಚೋಪ್ರಾ ಅವರ 88.16 ಮೀಟರ್ ಗುರಿಯನ್ನು ದಾಟಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ನೀರಜ್ ಚೋಪ್ರಾ ಮೊದಲ ಎಸೆತದಲ್ಲಿ ಕ್ರಮಿಸಿದ 88.16 ಮೀಟರ್​ ಮೊದಲ ಸ್ಥಾನವನ್ನು ಪಡೆದುಕೊಂಡಿತು.

ನೀರಜ್ ಚೋಪ್ರಾ ಮುಂದಿನ ಗುರಿ:

ನೀರಜ್ ಚೋಪ್ರಾ ಅವರ ಜೂನ್ 24 ರಂದು ಜೆಕ್ ಗಣರಾಜ್ಯದ ಒಸ್ಟ್ರಾವಾದಲ್ಲಿ ನಡೆಯುವ ಗೋಲ್ಡನ್ ಸ್ಪೈಕ್ ಅಥ್ಲೆಟಿಕ್ಸ್ ಮೀಟ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಅದಾದ ನಂತರ, ಜುಲೈ 4 ರಂದು ನೀರಜ್ ಚೋಪ್ರಾ ಅವರ ಕ್ಲಾಸಿಕ್‌ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈ ಎರಡು ಸ್ಪರ್ಧೆಗಳಿಗೂ ಮುನ್ನ ಪ್ಯಾರಿಸ್ ಡೈಮಂಡ್ ಲೀಗ್​ನಲ್ಲಿನ ಗೆಲುವು ನೀರಜ್ ಚೋಪ್ರಾ ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ.