“ಗೋಲ್ಡ್​​ ಸುರೇಶ್​ಗೆ ಜೀವ ಬೆದರಿಕೆ”

ಬೆಂಗಳೂರು: ಕನ್ನಡ ಬಿಗ್​​ಬಾಸ್​​-11ರ ಆವೃತ್ತಿಯ ಸ್ಪರ್ಧಿ ಸುರೇಶ್​ ಅಲಿಯಾಸ್​ ಗೋಲ್ಡ್​ ಸುರೇಶ್ ಅವರು​ ತಮಗೆ ಜೀವ ಬೆದರಿಕೆ ಕರೆ ಬಂದಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದು, ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಗಂಭೀರ ಸ್ವರೂಪವಲ್ಲದ ಪ್ರಕರಣ (ಎನ್‌ಸಿಆರ್)ದಾಖಲಾಗಿದೆ. ಮೈನುದ್ದೀನ್ ಹಾಗೂ ಸಹಚರರ ವಿರುದ್ಧ ಸುರೇಶ್ ದೂರು ನೀಡಿದ್ದಾರೆ.

ಹೋಮ್​ ಇಂಟೀರಿಯಲ್​ ಬ್ಯುಸಿನೆಸ್​ ಮಾಡುತ್ತಿರುವ ನಾನು, 2017ರಲ್ಲಿ ರಾಯಚೂರಿನ ಮಾನ್ವಿ ತಾಲೂಕಿನಲ್ಲಿ ಇಂಟೀರಿಯಲ್​​ ಕೆಲಸ ಒಪ್ಪಿಕೊಂಡಿದ್ದೆ. ಈ ಕೆಲಸ ಪೂರ್ಣಗೊಳಿಸಲು ಮೈನುದ್ದೀನ್‌ಗೆ ವಹಿಸಿದ್ದೆ. ಒಪ್ಪಂದದಂತೆ ಆತ ಕೆಲಸ ಪೂರ್ಣಗೊಳಿಸಲಿರಲಿಲ್ಲ. ಹೀಗಿದ್ದರೂ ಆತನಿಗೆ ಹಣ ಪಾವತಿ ಮಾಡಿದ್ದೆ. ಇದಾದ ಬಳಿಕ ಸ್ವಂತ ವ್ಯವಹಾರ ಮಾಡಿಕೊಂಡಿದ್ದೆ. ಆರೋಪಿ ಕರೆ ಮಾಡಿ ಹೆಚ್ಚು ಹಣ ಸಂಪಾದನೆ ಮಾಡಿದ್ದಿಯಾ, 6 ಲಕ್ಷ ರೂಪಾಯಿ ನೀಡಬೇಕು ಎಂದು ಒತ್ತಾಯಿಸಿ ಜೀವ ಬೆದರಿಕೆ ಹಾಕಿದ್ದಾನೆ. ಕರೆ ಮಾಡಿದ ವ್ಯಕ್ತಿಗೆ ಮನವೊಲಿಸಿ 50 ಸಾವಿರ ರೂಪಾಯಿ ನೀಡಿದ್ದೆ. ಆದರೆ, ಮತ್ತೆ ಕರೆ ಮಾಡಿ 6 ಲಕ್ಷ ಹಣ ನೀಡದಿದ್ದರೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸಿ ತೇಜೊವಧೆ ಮಾಡುವುದಾಗಿ ಬೆದರಿಸಿದ್ದಾನೆ ಎಂದು ಸುರೇಶ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಸುರೇಶ್​ ಪರ ವಕೀಲ ಗುರುರಾಜ್​ ಮಾತನಾಡಿ, “ಸುರೇಶ್ ಇಂಟೀರಿಯರ್ ಬ್ಯುಸಿನೆಸ್​ ಮಾಡಿಕೊಂಡಿದ್ದು, ಇಬ್ಬರ ನಡುವೆ 2017ರಲ್ಲಿ 7 ಲಕ್ಷದ ಹಣದ ವ್ಯವಹಾರ ನಡೆದಿದೆ. ಒಪ್ಪಂದದಂತೆ ನಿಗದಿತ ಹಣ ನೀಡಿದ್ದಾರೆ. ಹೀಗಿದ್ದರೂ ಸುರೇಶ್ ಬಿಗ್​​ಬಾಸ್​ಗೆ ಹೋಗಿ ಬಂದ ಮೇಲೆ ಇವರ ಸ್ಟೇಟಸ್ ನೋಡಿ ಮತ್ತೆ ಹಣ ಕೇಳಿದ್ದಾರೆ. ಹಣದ ವಿಷಯವಾಗಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಗೋವಿಂದರಾಜನಗರ ಠಾಣೆಗೆ ದೂರು ಕೊಡಲಾಗಿದೆ” ಎಂದರು.