ಸಿನಿಮೀಯ ರೀತಿಯಲ್ಲಿ ಬಂದು ಬೈಕ್​ಗೆ ಡಿಕ್ಕಿಹೊಡೆದ ಸ್ಕೂಲ್ ವ್ಯಾನ್

ಬೆಂಗಳೂರು, ಜೂನ್ 19: ಸ್ಕೂಲ್ ವ್ಯಾನೊಂದು ಅತಿವೇಗದಲ್ಲಿ ಬಂದು ಬೈಕ್​ಗೆ ಡಿಕ್ಕಿಹೊಡೆದ ಭೀಕರ ದೃಶ್ಯ ಕಾರೊಂದರ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗುತ್ತಿದೆ. ಅದೃಷ್ಟವಶಾತ್, ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮಹದೇವಪುರ ಸಂಚಾರ ಠಾಣಾ ವ್ಯಾಪ್ತಿಯ ಕನ್ನಮಂಗಲ ಗೇಟ್ ಬಳಿ ಬುಧವಾರ ಬೆಳಗ್ಗೆ 10.30 ರ ವೇಳೆಗೆ ಘಟನೆ ಸಂಭವಿಸಿದೆ. ಕನ್ನಮಂಗಲ ಗೇಟ್ ಮೂಲಕ ವೈಟ್ ಫೀಲ್ಡ್ ಕಡೆ ಅತಿ ವೇಗದಲ್ಲಿ ಬರುತ್ತಿದ್ದ ಸ್ಕೂಲ್ ವ್ಯಾನ್ ಸಿಗ್ನಲ್ ಬಳಿ ನಿಯಂತ್ರಣ ಸಿಗದೆ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಸಣ್ಣ ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದ ಬೈಕ್ ಸವಾರನಿಗೆ ಚಿಕಿತ್ಸೆ ನೀಡಲಾಗಿದೆ. ಮಹದೇವಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.