ಬಟ್ಟೆ ವ್ಯಾಪಾರಿಯ ಹನಿಟ್ರ್ಯಾಪ್ ಮಾಡಿಸಿ ‘₹10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಪೊಲೀಸ್ ಕಾನ್ಸ್​ಟೇಬಲ್’!

ಮೈಸೂರು: ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಬೈಲುಕುಪ್ಪೆ ಠಾಣೆ ಪೊಲೀಸರು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್​ ಶಿವಣ್ಣ ಎಂಬಾತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ಉಳಿದ ನಾಲ್ವರ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.

ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದ ನಿವಾಸಿ, ಬಟ್ಟೆ ವ್ಯಾಪಾರಿ ದಿನೇಶ್ ಕುಮಾರ್ ನೀಡಿದ ದೂರಿನ ಮೇರೆಗೆ ಶಿವಣ್ಣ, ಮತ್ತೊಬ್ಬ ಆರೋಪಿ ಮೂರ್ತಿ ಸೇರಿದಂತೆ ಐದು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.

ದೂರಿನ ವಿವರ: ರಾಜಸ್ಥಾನದ ನಾನು ಕಳೆದ ಹಲವು ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದು, ಪೂಜಾ ಪ್ಯಾಷನ್​ ಎಂಬ ಬಟ್ಟೆ ಅಂಗಡಿ ನಡೆಸುತ್ತಿದ್ದೇನೆ. ಜೂನ್ 11ರಂದು ಗ್ರಾಹಕರಂತೆ ನಮ್ಮ ಬಟ್ಟೆ ಅಂಗಡಿಗೆ ಬಂದ 23 ವರ್ಷ ಪ್ರಾಯದ ಯುವತಿಯೊಬ್ಬಳು, ಕೆಲವು ಬಟ್ಟೆಗಳನ್ನು ಖರೀದಿಸಿದ್ದಳು. ಬಳಿಕ ಹೊಸ ವಿನ್ಯಾಸದ ಬಟ್ಟೆ ಬಂದರೆ ತಿಳಿಸುವಂತೆ ಹಾಗೂ ಕೇಳುವ ಸಲುವಾಗಿ ನಿಮ್ಮ ಮೊಬೈಲ್​ ನಂಬರ್​ ಕೊಡುವಂತೆ ನನ್ನ ನಂಬರ್​ ತೆಗೆದುಕೊಂಡಿದ್ದಳು. ಬಳಿಕ ಆಕೆ ಸಲುಗೆಯಿಂದ ನನಗೆ ಮೆಸೇಜ್ ಮಾಡುತ್ತಿದ್ದು, ನಾನೂ ಮೆಸೇಜ್​ ಮಾಡುತ್ತಿದ್ದೆ. ಜೂ.14ರಂದು ವಾಟ್ಸ್‌ಆ್ಯಪ್ ಕರೆಮಾಡಿದ ಯುವತಿ, ನನ್ನನ್ನು ಮರಡಿಯೂರು ಗ್ರಾಮದಲ್ಲಿನ ತನ್ನ ಚಿಕ್ಕಮ್ಮನ ಮನೆಗೆ ಕರೆದಿದ್ದಳು. ಲೊಕೇಷನ್​ ಕೂಡ ಕಳಿಸಿದ್ದಳು. ಅವಳು ಹೇಳಿದ ಸ್ಥಳಕ್ಕೆ ತೆರಳಿದ್ದೆ.

ಮನೆಯ ಒಳಗೆ ಹೋದ ತಕ್ಷಣ ಕಾಫಿ ಕೇಳಿದ ಯುವತಿ ಬಳಿಕ ನನ್ನ ಪಕ್ಕದಲ್ಲಿ ಕುಳಿತುಕೊಂಡು ನೀನು ಅಂದ್ರೆ ನನಗೆ ಇಷ್ಟ ಎನ್ನುತ್ತಲೇ ಮೈ ಮುಟ್ಟಿ ತಬ್ಬಿಕೊಂಡು ನನ್ನನ್ನು ಲೈಂಗಿಕ ಕ್ರಿಯೆಗೆ ಪ್ರಚೋದಿಸಿದಳು. ಡೋರ್​ ಲಾಕ್​ ಮಾಡಿ ಬರುವುದಾಗಿ ಹೇಳಿ ಹೋಗಿ ಲಾಕ್​ ಮಾಡದೇ ಬಾಗಿಲು ಮಾತ್ರ ಹಾಕಿ ಬಂದಳು. ನಾವಿಬ್ಬರೂ ರೂಮಿನಲ್ಲಿದ್ದಾಗ ಯಾರೋ ಡೋರ್​ ಬಡಿದು, ಬಾಗಿಲು ತೆರೆದು ನೇರವಾಗಿ ಮೂವರು ವ್ಯಕ್ತಿಗಳು ರೂಮಿಗೆ ನುಗ್ಗಿದರು. ಈ ವೇಳೆ ನನಗೆ ನಿಂದಿಸುತ್ತಾ ಥಳಿಸಿದರು. ಬಳಿಕ ನನ್ನ ಬಟ್ಟೆ ಬಿಚ್ಚಿಸಿ ಅರೆ ಬೆತ್ತಲೆ ಮಾಡಿ ಆ ಹುಡುಗಿಯ ಜೊತೆ ನಿಲ್ಲಿಸಿ ಫೋಟೋ ಮತ್ತು ವಿಡಿಯೋ ಮಾಡಿಕೊಂಡರು. ನಾನು ಎಷ್ಟೇ ಕೇಳಿಕೊಂಡರೂ ಬಿಡದೇ ನನ್ನನ್ನು ಮನಬಂದಂತೆ ಥಳಿಸಿದರು. ಸ್ವಲ್ಪ ಸಮಯದ ನಂತರ ಹುಣಸೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಕಾನ್ಸ್​ಟೇಬಲ್​ ಶಿವಣ್ಣ ಬಂದರು. 10 ಲಕ್ಷ ರೂ. ಹಣ ತಂದುಕೊಟ್ಟರೆ ಇವರಿಂದ ನಿನ್ನನ್ನು ಬಿಟ್ಟು ಕಳಿಸುವುದಾಗಿ ಬೇಡಿಕೆ ಇಟ್ಟರು. ಕೊಡದಿದ್ದರೆ ವಿಡಿಯೋ ಹಾಗೂ ಫೋಟೊಗಳನ್ನು ಸಾಮಾಜಿಕ ತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದರು. ಅದಕ್ಕೆ ಹೆದರಿ ನಾನು ಒಪ್ಪಿಕೊಂಡೆ. ಅದರಂತೆ ನನ್ನ ತಮ್ಮನ ಮೂಲಕ ಅವರು ಹೇಳಿದ 10 ಲಕ್ಷ ರೂ. ಹಣ ನೀಡಿದೆ. ಹಣ ಪಡೆದು ನನ್ನನ್ನು ಬಿಟ್ಟು ಕಳುಹಿಸಿದರು ಎಂದು ದಿನೇಶ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇರೆಗೆ ಕಾನ್ಸ್​ಟೇಬಲ್ ಶಿವಣ್ಣ ಅವರನ್ನು​ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಉಳಿದ ನಾಲ್ವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪಿರಿಯಾಪಟ್ಟಣ ಠಾಣಾ ಪೊಲೀಸರು ತಿಳಿಸಿದ್ದಾರೆ.