ಕಲುಷಿತ ನೀರು ಪೂರೈಕೆ ಆರೋಪ, ಕಲುಷಿತ ನೀರು ಸೇವಿಸಿ ಕೊಪ್ಪಳದ ಕಿಲ್ಲಾರಹಟ್ಟಿ ಗ್ರಾಮದ ಜನರು ಅಸ್ವಸ್ಥ

ಗಂಗಾವತಿ(ಕೊಪ್ಪಳ): ಜಿಲ್ಲೆಯ ಕುಷ್ಟಗಿ ತಾಲೂಕಿನ ಕಿಲ್ಲಾರಹಟ್ಟಿ ಗ್ರಾಮದ ನೂರಾರು ಜನ ಕಳೆದ ಎರಡು-ಮೂರು ದಿನಗಳಿಂದ ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

“ಐತಿಹಾಸಿಕ ಪಟ್ಟಣ ಮುದ್ಗಲ್​ ಸಮೀಪದ ಕಿಲ್ಲಾರಹಟ್ಟಿ ತಾಂಡದಲ್ಲಿ ಬಹುತೇಕ ಲಂಬಾಣಿ ಸಮುದಾಯದ ಜನರೇ ಇದ್ದು ಡೆಂಗ್ಯೂ, ಮಲೇರಿಯಾ, ವಾಂತಿ-ಭೇದಿಯಿಂದ ಬಳಲುತ್ತಿದ್ದಾರೆ” ಎಂದು ವೈದ್ಯರು ತಿಳಿಸಿದ್ದಾರೆ.

“ಗ್ರಾಮದಲ್ಲಿ ಕಳೆದೊಂದು ವಾರದಿಂದ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಲುಷಿತ ನೀರು ಪೂರೈಕೆಯಾಗಿದೆ. ಅದನ್ನು ಸೇವಿಸಿ ಈ ರೀತಿಯಾಗಿರಬಹುದು” ಎಂದು ಗ್ರಾಮದ ನಿವಾಸಿ ಬಾಲಾಜಿ ರಾಠೋಡ ಹೇಳಿದರು.

ಆಸ್ಪತ್ರೆಗಳಲ್ಲಿ ದಾಖಲಾದವರಲ್ಲಿ ಮಕ್ಕಳು, ವೃದ್ಧರು, ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಕೆಲ ದಿನಗಳಿಂದ ನಗರದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಕೆಲವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇನ್ನುಳಿದವರಿಗೆ ಚಿಕಿತ್ಸೆ ಮುಂದುವರೆದಿದೆ.

ಈ ಬಗ್ಗೆ ಮಾತನಾಡಿದ ಕಿಲ್ಲಾರಹಟ್ಟಿ ತಾಂಡದ ಯುವಕ ಮೋತಿಲಾಲ್ ರಾಠೋಡ, “ನನ್ನ ತಾಂಡವು ಕಿಲ್ಲಾರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತಿದ್ದು, ಕಳೆದ 15 ದಿನದಿಂದ ಸಣ್ಣದಾಗಿ ಸಮಸ್ಯೆ ಆರಂಭವಾಗಿದೆ. ಇದೀಗ ತೀವ್ರವಾಗಿದ್ದು, ಒಂದೊಂದು ಮನೆಯಲ್ಲಿ ಇಬ್ಬರು, ಮೂವರು ಅನಾರೋಗ್ಯಕ್ಕೀಡಾಗಿದ್ದಾರೆ. ಇಡೀ ಗ್ರಾಮದಲ್ಲಿ ಜನಸಂಖ್ಯೆ 300 ಇದ್ದು, ಬಹುತೇಕರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಮನೆಗಳಿಗೆ ಬೀಗ ಹಾಕಿ ಆಸ್ಪತ್ರೆಗಳಿಗೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ತಿಳಿಸಿದರು.

“ಸುಮಾರು 4-5 ದಿನಗಳಿಂದ ಕಿಲ್ಲಾರಹಟ್ಟಿ ತಾಂಡದಲ್ಲಿ ಸಾಕಷ್ಟು ಶಂಕಿತ ಡೆಂಘಿ ಪ್ರಕರಣಗಳು ದಾಖಲಾಗುತ್ತಿವೆ. ಅಲ್ಲಿಂದ ನಮ್ಮ ಆಸ್ಪತ್ರೆಗೆ ತೀವ್ರ ಅಸ್ವಸ್ಥರು ಹಾಗೂ ಬಿಳಿ ರಕ್ತ ಕಣ ಕಡಿಮೆ ಇರುವ ರೋಗಿಗಳು ಬರುತ್ತಿದ್ದಾರೆ. ಇಲ್ಲಿ 15ರಿಂದ 20 ಕೇಸ್‌ಗಳನ್ನು ನಾವು ನೋಡುತ್ತಿದ್ದೇವೆ. ನಿನ್ನೆ 7-8 ರೋಗಿಗಳನ್ನು ಡಿಸ್ಚಾರ್ಜ್​ ಮಾಡಿದ್ದೇವೆ. ಯಾರೂ ಚಿಂತಾಜನಕ ಸ್ಥಿತಿಯಲ್ಲಿಲ್ಲ. ಎಲ್ಲರಿಗೂ ಉತ್ತಮ ಚಿಕಿತ್ಸೆ ನೀಡಿ ಕಳುಹಿಸುತ್ತಿದ್ದೇವೆ. ಇಲ್ಲಿಂದ ಹೆಚ್ಚಿನ ಚಿಕಿತ್ಸೆಗೆಂದು ಬೇರೆ ಕಡೆ ನಾವು ಕಳುಹಿಸಿರುವ ಪ್ರಕರಣ ಕಂಡುಬಂದಿಲ್ಲ. ರೋಗಿಗಳ ಬಿಳಿ ರಕ್ತಕಣ ಹಾಗೂ ಅವರಿಗೆ ಇರುವ ರೋಗ ಲಕ್ಷಣಗಳನ್ನು ನೋಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿವರೆಗೆ 30 ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ. ಇವತ್ತು ಆಸ್ಪತ್ರೆಯಲ್ಲಿ 12 ರೋಗಿಗಳು ಇದ್ದಾರೆ”- ಸತೀಶ್ ರಾಯ್ಕರ್, ಖಾಸಗಿ ಆಸ್ಪತ್ರೆ ವೈದ್ಯರು.