ಶಿವಮೊಗ್ಗ: ಮಲಗಿದ್ದಾಗ ಮನೆ ಗೋಡೆ ಕುಸಿದು ಶತಾಯುಷಿ ಅಜ್ಜಿ ಸಾವು, ನಾಲ್ವರಿಗೆ ಗಾಯ

ಶಿವಮೊಗ್ಗ: ನಿರಂತರ ಮಳೆಗೆ ಮನೆಯ ಗೋಡೆ ಕುಸಿದು ಮಲಗಿದ್ದಾಗಲೇ 100 ವರ್ಷದ ವೃದ್ಧೆ ಸಾವನ್ನಪ್ಪಿ, ಇತರ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಶಿವಮೊಗ್ಗ ತಾಲೂಕು ಅಡಗಡಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಗ್ರಾಮದ ಹೇಮಾವತಿ ಎಂಬವರ ಮನೆಯ ಗೋಡೆ ಕುಸಿತವಾಗಿ ಮನೆಯಲ್ಲಿ ಮಲಗಿದ್ದ ಸಿದ್ದಮ್ಮ (100 ವರ್ಷ) ಸಾವನ್ನಪ್ಪಿದ್ದಾರೆ‌. ಸಿದ್ದಮ್ಮ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕುಂಕುವ ಗ್ರಾಮದವರಾಗಿದ್ದು, ಮನೆಯೊಡತಿ ಹೇಮಾವತಿ ಅವರ ಸಂಬಂಧಿಕರಾಗಿದ್ದರು.‌ ಅವರು ಕೆಲ ದಿನಗಳ ಹಿಂದಷ್ಟೇ ಅಡಗಡಿ ಗ್ರಾಮಕ್ಕೆ ಆಗಮಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಭಾನುವಾರದಿಂದಲೂ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಹೇಮಾವತಿ ಅವರ ಮನೆ ಮಣ್ಣಿನ ಗೋಡೆಯದಾಗಿದ್ದು, ಮಳೆಯಿಂದ ನೆನೆದು ಕುಸಿತಗೊಂಡಿದೆ. ಈ ವೇಳೆ ಮನೆಯಲ್ಲಿ ಮಲಗಿದ್ದ ಸಿದ್ದಮ್ಮ ಗೋಡೆಯ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಉಳಿದಂತೆ, ಹೇಮಾವತಿಯ ಅವರ ಕುಟುಂಬ ಸದಸ್ಯರಾದ ಪಲ್ಲವಿ, ಪರಶುರಾಮ್ ಹಾಗೂ ಚೇತನ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಕುಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾಗರ, ಹೊಸನಗರದ ಶಾಲೆ, ಕಾಲೇಜುಗಳಿಗೆ ಇಂದು ರಜೆ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಹೊಸನಗರ ಹಾಗೂ ಸಾಗರ ತಾಲೂಕಿನ ಅಂಗನವಾಡಿ, ಶಾಲಾ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಇಂದು ರಜೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ಮೇರೆಗೆ ಎರಡೂ ತಾಲೂಕುಗಳ ತಹಶೀಲ್ದಾರರು ರಜೆ ಘೋಷಣೆ ಮಾಡಿದ್ದಾರೆ‌.