
ಇರಾನ್‌ನ ಪರಮಾಣು ತಾಣಗಳು ಮತ್ತು ಮಿಲಿಟರಿ ನಾಯಕರ ಮೇಲೆ ಇಸ್ರೇಲ್ ಕೈಗೊಂಡ ಆಪರೇಷನ್ ರೈಸಿಂಗ್ ಲಯನ್ಗೆ ಪ್ರತೀಕಾರವಾಗಿ ಇರಾನ್ ಸರಣಿ ಕ್ಷಿಪಣಿ ದಾಳಿ ನಡೆಸಿದೆ. ಶನಿವಾರ ಮುಂಜಾನೆ ನಡೆದ ದಾಳಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿ, ಹಲವುರು ಗಾಯಗೊಂಡಿದ್ದಾರೆ. ಇಸ್ರೇಲ್‌ನಾದ್ಯಂತ ಶುಕ್ರವಾರ ವಾಯುದಾಳಿಯ ಸೈರನ್‌ಗಳು ಮೊಳಗಿವೆ. ಇರಾನ್ ಸುಮಾರು 150 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ಡ್ರೋನ್ ಹಾಗೂ ಸರಣಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಇಸ್ರೇಲ್ ಮೇಲೆ ಪ್ರತೀಕಾರ ತೀರಿಸಿಕೊಂಡಿದೆ. ಜೆರುಸಲೆಮ್ ಮತ್ತು ಟೆಲ್ ಅವೀವ್ ನಗರಗಳಲ್ಲಿ ರಾತ್ರಿಯಿಡೀ ಸ್ಫೋಟಗಳು ಕೇಳಿಬಂದಿವೆ. ಅನೇಕ ಕಟ್ಟಡಗಳು ಅಲುಗಾಡಿವೆ. ಈಗಾಗಲೇ ಗಾಜಾ ಪಟ್ಟಿಯಲ್ಲಿ ಇಸ್ರೇಲ್-ಹಮಾಸ್ ಯುದ್ಧದಿಂದ ತತ್ತರಿಸಿರುವ ನಾಗರಿಕರು ಮತ್ತೆ ಗಂಟೆಗಳ ಕಾಲ ಬಾಂಬ್ ಆಶ್ರಯ ತಾಣಗಳ ಮೊರೆ ಹೋಗುವಂತಾಗಿದೆ.
ಶುಕ್ರವಾರವೂ ಜೆರುಸಲೆಮ್‌ನ ಹಲವೆಡೆ ಸ್ಫೋಟಗಳ ಸದ್ದು ಕೇಳಿಬಂದಿತ್ತು. ಕ್ಷಿಪಣಿ ದಾಳಿಯ ಹಿನ್ನೆಲೆಯಲ್ಲಿ ಟೆಲ್ ಅವಿವ್‌ನಲ್ಲಿ ದಟ್ಟ ಹೊಗೆ ಆವರಿಸಿರುವುದನ್ನು ಇಸ್ರೇಲಿ ಮಾಧ್ಯಮಗಳು ಪ್ರಸಾರ ಮಾಡಿವೆ. ಒಂಬತ್ತು ಕಡೆಗಳಲ್ಲಿ ತೀವ್ರ ನಷ್ಟ ಉಂಟಾಗಿದ್ದು, ಸುಮಾರು 15 ಜನರು ಗಾಯಗೊಂಡಿದ್ದಾರೆ. ಹೆಚ್ಚಿನವರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್ ಸೇನೆಯು ದೇಶಾದ್ಯಂತ ಜನರು ಬಾಂಬ್ ರಕ್ಷಣಾ ತಾಣಗಳಿಗೆ ಸ್ಥಳಾಂತರಗೊಳ್ಳುವಂತೆ ಆದೇಶಿಸಿದೆ.
ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರತಿಬಂಧಿಸುವಲ್ಲಿ ಇಸ್ರೇಲ್‌ಗೆ ಯುಎಸ್ ನೆರವಾಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಇಸ್ರೇಲ್‌ನಲ್ಲಿ ಲಕ್ಷಾಂತರ ಅಮೆರಿಕನ್ನರು ವಾಸಿಸುತ್ತಿದ್ದಾರೆ. ಅವರ ಸರ್ಕಾರ ರಕ್ಷಿಸುವ ಕೆಲಸವನ್ನು ಯುಎಸ್ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಪ್ರತಿಕ್ರಿಯಿಸಿ, ಇಸ್ರೇಲ್‌ನ ನಾಗರಿಕ ವಾಸಸ್ಥಳಗಳ ಮೇಲೆ ಇರಾನ್ ಕ್ಷಿಪಣಿಗಳನ್ನು ಹಾರಿಸುವ ಮೂಲಕ ರೆಡ್ ಲೈನ್ ಕ್ರಾಸ್ ಮಾಡಿದೆ. ನಾವು ಇಸ್ರೇಲ್ ನಾಗರಿಕರ ರಕ್ಷಣೆ ಮಾಡುತ್ತೇವೆ. ಅಯತೊಲ್ಲಾ ಆಡಳಿತವು ತನ್ನ ಘೋರ ಕೃತ್ಯಕ್ಕೆ ಭಾರೀ ಬೆಲೆ ತೆರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪರಮಾಣು ಮತ್ತು ಮಿಲಿಟರಿ ತಾಣಗಳನ್ನು ಗುರಿಯಾಗಿಸಿಕೊಂಡು ಗುರುವಾರ ಇರಾನ್‌ನಾದ್ಯಂತ ಇಸ್ರೇಲ್ ದಾಳಿ ನಡೆಸಿತ್ತು. ಕನಿಷ್ಠ ಮೂರು ಉನ್ನತ ಮಿಲಿಟರಿ ಅಧಿಕಾರಿಗಳನ್ನು ಕೊಂದಿದೆ ಎಂದು ವರದಿಯಾಗಿದ್ದವು. ಇದರಿಂದ ಮಧ್ಯಪ್ರಾಚ್ಯದ ಎರಡು ಕಡುವಿರೋಧಿಗಳ ನಡುವೆ ಪೂರ್ಣ ಪ್ರಮಾಣದ ಯುದ್ಧದ ಭೀತಿ ಸೃಷ್ಟಿಯಾಗಿದೆ. 1980ರ ದಶಕದ ಇರಾಕ್‌ನೊಂದಿಗಿನ ಯುದ್ಧದ ಬಳಿಕ ಇರಾನ್ ಎದುರಿಸಿದ ಅತ್ಯಂತ ಭೀಕರ ದಾಳಿ ಇದಾಗಿದೆ.
ಪರಮಾಣು ಯೋಜನೆಗಳಲ್ಲಿ ಇರಾನ್ ವೇಗವಾಗಿ ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಉದ್ವಿಗ್ನತೆಯು ಉಲ್ಭಣಗೊಂಡು ಈ ದಾಳಿಗಳು ನಡೆದಿವೆ. ಹಲವು ವರ್ಷಗಳಿಂದಲೂ ಇರಾನ್ ಮೇಲೆ ದಾಳಿ ಮಾಡುವುದಾಗಿ ಇಸ್ರೇಲ್ ಬೆದರಿಕೆ ಹಾಕಿತ್ತು. ಆದರೆ ಅಮೆರಿಕ ಅದನ್ನು ಸತತವಾಗಿ ತಡೆಯಲು ಪ್ರಯತ್ನಿಸುತ್ತಿದೆ. ಇದು ಮಧ್ಯಪ್ರಾಚ್ಯದಾದ್ಯಂತ ವ್ಯಾಪಕ ಸಂಘರ್ಷ ಹುಟ್ಟುಹಾಕುವ ಆತಂಕ ಮೂಡಿಸಿದೆ.
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ಇಸ್ರೇಲ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಇರಾನ್ ಕ್ಷಿಪಣಿಗಳು ಇಸ್ರೇಲ್ ಕಡೆಗೆ ಹಾರುತ್ತಿದ್ದಂತೆ ಸಂದೇಶ ನೀಡಿರುವ ಅವರು ಮಿಲಿಟರಿ ಪ್ರತಿದಾಳಿಗೆ ಇರಾನ್ ಸಿದ್ಧವಾಗಿದೆ ಎಂದು ಹೇಳಿದ್ದಾರೆ. “ಇಸ್ರೇಲ್ ದಾಳಿ ಮಾಡಿದ ತಕ್ಷಣ ಮತ್ತು ಅದು ಇಲ್ಲಿಗೆ ಮುಗಿಯಿತು ಎಂದು ಭಾವಿಸಬೇಡಿ. ಇಲ್ಲ, ಅವರು ಯುದ್ಧ ಆರಂಭಿಸಿ ದೊಡ್ಡ ತಪ್ಪು ಮಾಡಿದ್ದಾರೆ. ನಾವು ಅವರಿಗೆ ತಪ್ಪಿಸಿಕೊಳ್ಳಲು ಬಿಡುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.
ಇರಾನ್ ಕ್ಷಿಪಣಿಗಳ ದಾಳಿಯಿಂದಾಗಿ ಶುಕ್ರವಾರ ಇಸ್ರೇಲ್ ಮಧ್ಯಭಾಗದಲ್ಲಿ ಏಳು ಜನರು ಗಾಯಗೊಂಡಿದ್ದಾರೆ ಎಂದು ಇಸ್ರೇಲಿ ರಕ್ಷಣಾ ಪಡೆಗಳನ್ನು ಉಲ್ಲೇಖಿಸಿ ಎಎಫ್ಬಿ ವರದಿ ಮಾಡಿದೆ. ಇರಾನ್ ಇಲ್ಲಿನ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ದೃಢಪಡಿಸಿವೆ.
ಇಸ್ಫಹಾನ್‌ನಲ್ಲಿರುವ ಇರಾನಿನ ಪರಮಾಣು ತಾಣವನ್ನು ಹೊಡೆದು ಹಾಕಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಆದರೆ ಇರಾನ್ ಇದನ್ನು ತಳ್ಳಿಹಾಕಿದೆ. ಟೆಹ್ರಾನ್‌ನ ಆಗ್ನೇಯಕ್ಕೆ ಸುಮಾರು 350 ಕಿಲೋಮೀಟರ್ (215 ಮೈಲುಗಳು) ದೂರದಲ್ಲಿರುವ ಇಸ್ಫಹಾನ್‌ನಲ್ಲಿರುವ ಪರಮಾಣು ತಾಣದಲ್ಲಿ ಸಾವಿರಾರು ವಿಜ್ಞಾನಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ದೇಶದ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಮೂರು ಚೀನೀ ಸಂಶೋಧನಾ ರಿಯಾಕ್ಟರ್‌ಗಳು ಮತ್ತು ಪ್ರಯೋಗಾಲಯಗಳಿರುವ ಸ್ಥಳವಾಗಿದೆ.
ಕದನ ವಿರಾಮಕ್ಕೆ ವಿಶ್ವಸಂಸ್ಥೆ ಕರೆ: ಇರಾನ್-ಇಸ್ರೇಲ್ ಪರಸ್ಪರ ದಾಳಿಯ ಹಿನ್ನೆಲೆಯಲ್ಲಿ ಯುದ್ಧದ ಕಾರ್ಮೋಡ ಆವರಿಸಿದೆ. ಈ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪನೆಗೆ ವಿಶ್ವಸಂಸ್ಥೆ ಮುಂದಾಗಿದೆ. ಎರಡೂ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪುವಂತೆ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರು ಕರೆ ನೀಡಿದ್ದಾರೆ.



