ಮುಂಬೈ: ಮೇಘಾಲಯದಲ್ಲಿ ರಾಜಾ ರಘುವಂಶಿ ಹನಿಮೂನ್ ಮರ್ಡರ್ ಕೇಸ್ ಮಾಸುವ ಮುನ್ನವೇ ಮತ್ತೊಂದು ಅಂತಹದೇ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ. ಮದುವೆಯಾದ ಮೂರೇ ವಾರಕ್ಕೆ ಪತ್ನಿಯೇ ಪತಿಯನ್ನು ಕೊಡಲಿಯಿಂದ ಹೊಡೆದು ಹತ್ಯೆಗೈದಿದ್ದಾಳೆ.

ಅನಿಲ್ ಲೋಖಂಡೆ (50) ಕೊಲೆಯಾದ ಪತಿ. ರಾಧಿಕಾ ಲೋಖಂಡೆ (29) ಹತ್ಯೆಗೈದ ಆರೋಪಿ.
ಮೇ23ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ರಾಧಿಕಾ ಹಾಗೂ ಅನಿಲ್ ಲೋಖಂಡೆ ವಿವಾಹವಾಗಿತ್ತು. ಮಂಗಳವಾರ (ಜೂ.10) ರಾತ್ರಿ, ಇಬ್ಬರೂ ತೀವ್ರವಾಗಿ ಜಗಳವಾಡಿದ್ದರು. ಬಳಿಕ ಮಧ್ಯರಾತ್ರಿ ವೇಳೆಗೆ ಅನಿಲ್ ಲೋಖಂಡೆ ನಿದ್ರೆಗೆ ಜಾರಿದ್ದರು. ಈ ವೇಳೆ ಕೋಪದಲ್ಲಿ ರಾಧಿಕಾ ಲೋಖಂಡೆ ಕೊಡಲಿಯಿಂದ ಪತಿ ಅನಿಲ್ ತಲೆಗೆ ಹೊಡೆದು ಕೊಂದಿದ್ದಳು. ಸ್ಪಲ್ಪ ಸಮಯದ ಬಳಿಕ ರಾಧಿಕಾ ತನ್ನ ಸೋದರಸಂಬಂಧಿಗೆ ಕರೆ ಮಾಡಿ ಕೊಲೆಯ ಬಗ್ಗೆ ತಿಳಿಸಿದ್ದಳು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಪೊಲೀಸರು ಬುಧವಾರ ಆರೋಪಿ ರಾಧಿಕಾಳನ್ನು ಬಂಧಿಸಿದ್ದಾರೆ. ಬಿಎನ್‌ಎಸ್ ಸೆಕ್ಷನ್ 103 (1) ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.
