ಕುಮಟಾ ಸರ್ಕಾರಿ ಆಸ್ಪತ್ರೆಯ ವೈದ್ಯರ ವರ್ಗಾವಣೆ..? ತಾತ್ಕಾಲಿಕ ಪಟ್ಟಿಯಲ್ಲಿ ಐವರ ಹೆಸರು 

ಕುಮಟಾ : ಜನರ ಜೀವ ರಕ್ಷಣೆಗೆ ಹಾಗೂ ಬಡಜನರ ಆಶಾಕಿರಣವಾಗಿರುವ ಕುಮಟಾ ಸರ್ಕಾರಿ ಆಸ್ಪತ್ರೆಯ ಐವರು ವೈದ್ಯರ ವರ್ಗಾವಣೆಯ ಬಗ್ಗೆ ತಾತ್ಕಾಲಿಕ ಪಟ್ಟಿ ಪ್ರಕಟಗೊಂಡಿದ್ದು, ಐವರು ವೈದ್ಯರು ವರ್ಗಾವಣೆಗೊಂಡರೆ ಮುಂದಿನ ಪರಿಸ್ಥಿತಿ ಏನು ಎಂಬ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದೆ.

ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎನ್ನುವುದು ಕೂಗು ಕೇಳಿಬರುತ್ತಿರುವ ಸಂದರ್ಭದಲ್ಲಿಯೇ ಈ ಪ್ರಕ್ರಿಯೆ ನಡೆಯುತ್ತಲಿದೆ. ಈಗಾಗಲೇ ಸರ್ಕಾರದ ಆರೋಗ್ಯ ಇಲಾಖೆ ವರ್ಗಾವಣೆ ಪಟ್ಟಿ ಸಿದ್ಧಪಡಿಸಿಕೊಂಡಿದ್ದು, ಕುಮಟಾ ಸರ್ಕಾರಿ ಆಸ್ಪತ್ರೆಯ ಐವರು ವೈದ್ಯರನ್ನು ವರ್ಗಾವಣೆ ಮಾಡಲು ಕೌನ್ಸಿಲಿಂಗಿಗೆ ತಯಾರಿ ನಡೆಸಿದೆ

. ಕುಮಟಾ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಗಣೇಶ ನಾಯ್ಕ, ಎಲುಬು ತಜ್ಞ ಡಾ. ಸದಾನಂದ ಪೈ, ಚರ್ಮ ರೋಗ ತಜ್ಞೆ ಡಾ. ಸುಮಲತಾ, ಶಸ್ತ್ರ ಚಿಕಿತ್ಸಾ ತಜ್ಞ ಡಾ. ಪಾಂಡುರಂಗ ದೇವಾಡಿಗ ಹಾಗೂ ದಂತ ವೈದ್ಯ ಡಾ. ಕೇಶವ ಭಟ್ ಇವರು ಸರ್ಕಾರದ ವರ್ಗಾವಣೆ ಪಟ್ಟಿಯಲ್ಲಿದ್ದಾರೆ.

ಕುಮಟಾಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಂತೂ ಕೊಡಲಿಲ್ಲ. ಆದರೆ ಕನಿಷ್ಟ ಇಲ್ಲಿರುವ ತಾಲೂಕಾಸ್ಪತ್ರೆಗಾದರೂ ಒಂದಿಷ್ಟು ಹೆಚ್ಚುವರಿ ವೈದ್ಯರ ಸೇವೆ ಕಲ್ಪಿಸಬೇಕಿತ್ತಲ್ಲವೇ? ಅದು ಬಿಟ್ಟು, ಇಲ್ಲಿರುವ ವೈದ್ಯರನ್ನೇ ವರ್ಗಾವಣೆ ಮಾಡಲು ಸಜ್ಜಾಗಿದೆ ಎಂದು ಸಾರ್ವಜನಿಕರು ಗೋಗರೆಯುತ್ತಿದ್ದಾರೆ.

ಐವರು ವೈದ್ಯರನ್ನು ಒಮ್ಮೆಲೇ ಬೇರೆಡೆಗೆ ವರ್ಗಾವಣೆ ಮಾಡಿದರೆ ಜನಸಾಮಾನ್ಯರಿಗೆ ಖಂಡಿತ ಸಮಸ್ಯೆ ಆಗಲಿದೆ ಎಂಬುದು ಹಲವರ ಅಭಿಪ್ರಾಯ. ಈ ಬಗ್ಗೆ ಸರಕಾರ ಸೂಕ್ತ ಚಿಂತನೆ ನಡೆಸಿ ಕಾರ್ಯಯೋಜನೆ ರೂಪಿಸಬೇಕು.

ವೈದ್ಯರ ವರ್ಗಾವಣೆಯ ಸಂದರ್ಭದಲ್ಲಿ ಕನಿಷ್ಠ 10 ವರ್ಷಗಳ ಸೇವಾವಧಿಯ ನಂತರದಲ್ಲಿ ವರ್ಗಾವಣೆ ಮಾಡಲಾಗುತ್ತಿತ್ತು. ಆದರೆ ಈ ಎಲ್ಲಾ ಅಂಶಗಳನ್ನು ಗಾಳಿಗೆ ತೂರಿ ಇದೀಗ ವರ್ಗಾವಣೆ ಪಟ್ಟಿ ಪ್ರಕಟಗೊಂಡಿದೆ ಎಂಬ ಮಾತುಗಳು ವೈದ್ಯಲೋಕದಲ್ಲಿಯೇ ಕೇಳಿಬರುತ್ತದೆ.

ಒಬ್ಬ ವೈದ್ಯರನ್ನು ರೋಗಿ ನಂಬಬೇಕು ಎಂದರೆ ಆತನಿಂದ ಚಿಕಿತ್ಸೆ ಪಡೆದು ಗುಣಮುಖರಾಗಬೇಕು. ಅವರ ಬಗ್ಗೆ ಕೇಳಿ ತಿಳಿದುಕೊಳ್ಳಬೇಕು. ಜೀವದ ಹಂಗು ತೊರೆದು ಯಾರೂ ವೈದ್ಯರನ್ನು ಸಂಪರ್ಕ ಮಾಡುವುದಿಲ್ಲ. ವೈದ್ಯರ ಮೇಲೆ ನಂಬಿಕೆ ಬರಲು ಕನಿಷ್ಠ ಕಾಲಾವಧಿಯಾದರೂ ಬೇಕು. ಇದೀಗ ಜನರು ಮೆಚ್ಚಿಕೊಂಡ ವೈದ್ಯರನ್ನು ಬೇರೆಡೆಗೆ ಸ್ಥಳಾಂತರ ಮಾಡಿದರೆ ಒಮ್ಮೆಲೇ ಇಷ್ಟು ವೈದ್ಯರನ್ನು ಜನರು ಹೇಗೆ ಒಪ್ಪಿಕೊಳ್ಳುತ್ತಾರೆ? ಇದರಿಂದಾಗಿ ಆಸ್ಪತ್ರೆಯ ಸ್ಥಿತಿ ಎತ್ತಣ ಸಾಗಲಿದೆ ಎಂಬ ಚಿತ್ರಣವೆ ಅರಿವಿಲ್ಲದಂತೆ ವರ್ತನೆ ಮಾಡಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಗಂಭೀರ ಚಿಂತನೆ ನಡೆಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.