‘ಕಾಲ್ತುಳಿತ ಪ್ರಕರಣದಲ್ಲಿ‌ ವಿರಾಟ್ ಕೊಹ್ಲಿ ಹೆಸರು ಹಾಳು ಮಾಡೋದು ಸರಿಯಲ್ಲ’ -ಸುಮಲತಾ ಅಂಬರೀಶ್ 

ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಸಂದರ್ಭ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಕೊನೆಯುಸಿರೆಳೆದರು. ಈ ಘಟನೆ ಭಾರತೀಯರ ಅಕ್ರೋಶಕ್ಕೆ ಕಾರಣವಾಗಿದ್ದು, ಕೆಲವರು ಆರ್​ಸಿಬಿ ಮತ್ತು ವಿರಾಟ್​ ಕೊಹ್ಲಿ ಅವರನ್ನು ದೂರುತ್ತಿದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ಟ್ರೋಲ್​ಗಳು ಉಲ್ಭಣಗೊಂಡಿವೆ. ಇಲ್ಲಿ ಕೊಹ್ಲಿ ಅವರ ಹೆಸರು ಹಾಳು ಮಾಡೋದು ಸರಿಯಲ್ಲ ಎಂದು ಹಿರಿಯ ನಟಿ, ಮಾಜಿ ಸಂಸದೆ ಸುಮಲತಾ ಅಂಬರೀಷ್ ತಮ್ಮ ಅಸಮಧಾನ ಹೊರಹಾಕಿದ್ದಾರೆ.

ಬಹುಭಾಷಾ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಶಕ್ತಿ ಸರವಣನ್ ಅವರ ಪೋಸ್ಟ್​ಗೆ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಸುದೀರ್ಘ ಬರಹ ಹಂಚಿಕೊಂಡು, ಸುಮಲತಾ ಅಂಬರೀಶ್​ ಪ್ರತಿಕ್ರಿಯಿಸಿದ್ದಾರೆ.

ಸುಮಲತಾ ಅಂಬರೀಶ್​ ಪೋಸ್ಟ್​​ನಲ್ಲೇನಿದೆ?

”ಶಕ್ತಿ ಸರವಣನ್ ಅವರ ಫೇಸ್‌ಬುಕ್‌ ಪೋಸ್ಟ್‌ ಅನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ವಿರಾಟ್ ಕೊಹ್ಲಿ ವಿರುದ್ಧ ತಮ್ಮ ಕೋಪವನ್ನು ಹೊರಹಾಕಲು ಪ್ರಯತ್ನಿಸುತ್ತಿರುವ ಎಲ್ಲಾ ಮೂರ್ಖರಿಗೆ.. ದುರಂತ ಘಟನೆಯನ್ನು ಬಳಸಿಕೊಂಡು ಅವರನ್ನು ಟೀಕಿಸಲು ಯತ್ನಿಸುತ್ತಿರುವವರು, ಬುದ್ಧಿ ಮತ್ತು ಆತ್ಮಸಾಕ್ಷಿ ಹಾಗೂ ಸಾಧ್ಯವಾದರೆ ಮೂಲಭೂತ ಸಾಮಾನ್ಯ ಜ್ಞಾನಕ್ಕನುಗುಣವಾಗಿ ವರ್ತಿಸಿ. ಸಾರ್ವಜನಿಕ ಸುರಕ್ಷತೆಯ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರ ಮತ್ತು ಆಡಳಿತದ ಮೇಲಿದ್ದು, ಅವರು ವಿಫಲರಾಗಿದ್ದಾರೆ ಮತ್ತು ಅವರನ್ನು ಈ ಘಟನೆಯ ಹೊಣೆಗಾರರನ್ನಾಗಿ ಮಾಡಬೇಕು”.

”ಬದಲಾಗಿ, ಅವರ ಅಪರಾಧವನ್ನು ಮರೆಮಾಚಲು ಬೇರೆಯವರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರದ ಕ್ರಿಮಿನಲ್ ನಿರ್ಲಕ್ಷ್ಯದಿಂದಾಗಿ 11 ಅಮಾಯಕರ ಜೀವಗಳು ಬಲಿಯಾಗಿವೆ. ನ್ಯಾಯ ಅನ್ನೋದಿದ್ದರೆ, ಅವರನ್ನು ವಿಚಾರಣೆಗೆ ಒಳಪಡಿಸಬೇಕು ಮತ್ತು ಕಠಿಣ ಶಿಕ್ಷೆ ವಿಧಿಸಬೇಕು. ಈ ರೀತಿಯ ದುರಂತವನ್ನು ತಂಡ ಅಥವಾ ಆಟಗಾರರ ಮೇಲೆ ಹೊರಿಸುವುದು ನಿಮ್ಮ ಅಜ್ಞಾನ ಅಥವಾ ಕ್ಷುಲ್ಲಕ ಮನಸ್ಸುಗಳನ್ನು ಬಹಿರಂಗಪಡಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.