
ಚಾಮರಾಜನಗರ: ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಆನೆಗುಂದಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಹನೂರು ತಾಲೂಕಿನ ಪಿ. ಜಿ. ಪಾಳ್ಯ ಗ್ರಾಮದ ಚಾಮರಾಜು (25) ಮತ್ತು ಆಕಾಶ್ (22) ಮೃತಪಟ್ಟ ಯುವಕರು. ಹನೂರು ತಾಲೂಕಿನ ಪಿ. ಜಿ ಪಾಳ್ಯ ಗ್ರಾಮದ ನಿವಾಸಿಗಳಾದ ಚಾಮರಾಜು ಚಾಲಕ ವೃತ್ತಿ ಮಾಡಿಕೊಂಡಿದ್ದರೆ, ಆಕಾಶ್ ಬೇಕರಿಯಲ್ಲಿ ಕೆಲಸ ಮಾಡಿಕೊಂಡು ಬೆಂಗಳೂರಿನಲ್ಲಿ ವಾಸವಿದ್ದರು. ಭಾನುವಾರ ಸಂಬಂಧಿಕರ ಗೃಹಪ್ರವೇಶ ಇದ್ದ ಹಿನ್ನೆಲೆ ಪಿಜಿ ಪಾಳ್ಯ ಗ್ರಾಮಕ್ಕೆ ಆಗಮಿಸಿದ್ದರು.
ಗೃಹಪ್ರವೇಶ ಮುಗಿಸಿ ದೊಡ್ಡಪ್ಪ ಕೆಂಪರಾಜು ಅವರ ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಈಜಲು ಹೋಗಿ ಮೇಲೆ ಬರಲು ಸಾಧ್ಯವಾಗದೆ ಅಸುನೀಗಿದ್ದಾರೆ.
ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ತಿಳಿಯುತ್ತಿದ್ದಂತೆ ಹನೂರು ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಸಂಭವಿಸಿತ್ತು ದುರಂತ: ಜಮೀನಿನಲ್ಲಿ ಕೃಷಿ ಕೆಲಸ ಮುಗಿಸಿಕೊಂಡು, ಕೃಷಿ ಹೊಂಡದಲ್ಲಿ ಕೈಕಾಲು ತೊಳೆಯುವಾಗ ಕಾಲು ಜಾರಿ ಬಿದ್ದು ಉಪನ್ಯಾಸಕನೊಬ್ಬರು ಸಾವನ್ನಪ್ಪಿದ ಘಟನೆ ಇತ್ತೀಚಿಗೆ ಸಂಭವಿಸಿತ್ತು.
ಜಿಲ್ಲೆಯ ಚೇಳೂರು ತಾಲೂಕಿನ ವಂಗಿಮಳ್ಳು ಗ್ರಾಮದಲ್ಲಿ ಕಳೆದ ಮೇ 25 ರಂದು ಈ ಘಟನೆ ನಡೆದಿತ್ತು. ಗ್ರಾಮದ ಮೃತ ಶಂಕರರೆಡ್ಡಿ(48) ಉಪನ್ಯಾಸಕರಾಗಿದ್ದು, ಇದರ ಜೊತೆಯಲ್ಲಿ ಕೃಷಿ ಕೆಲಸ ಸಹ ಮಾಡುತ್ತಿದ್ದರು. ಆದ್ರೆ ಅಂದು ಜಮೀನಿನಲ್ಲಿ ಕೃಷಿ ಕೆಲಸಕ್ಕೆ ಹೋದಾಗ ಈ ಅವಘಡ ನಡೆದಿತ್ತು.
