
ಬೆಂಗಳೂರು: ರೈತರು ಪಾರಂಪರಿಕ ವ್ಯವಸಾಯಕ್ಕೆ ಸೀಮಿತವಾಗದೆ, ವೈವಿಧ್ಯಮಯ ಕೃಷಿ, ಪ್ರೊಸೆಸಿಂಗ್ ಮತ್ತು ರಫ್ತು ಸಾಧನೆಗಳತ್ತ ಗಮನ ಹರಿಸಬೇಕು. ಕೇಂದ್ರ ಸರ್ಕಾರ ಯಾವತ್ತೂ ರೈತರಿಗೆ ಬೆಂಬಲವಾಗಿ ನಿಂತಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು.
ಭಾನುವಾರ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ದ ಅಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ತೋಟಗಾರಿಕಾ ಸಂಸ್ಥೆಯಲ್ಲಿ ಶ್ಲಾಘನೀಯ ಸಂಶೋಧನೆ ನಡೆಯುತ್ತಿದೆ. ರೈತರೂ ಸಹ ಹೊಸ ಪ್ರಯೋಗಗಳ ಮೂಲಕ ನಾವೀನ್ಯತೆ ತರುತ್ತಿದ್ದಾರೆ. ಕಮಲಂ (ಡ್ರಾಗನ್ ಫ್ರೂಟ್) ಕೃಷಿಯಲ್ಲಿ ಮೊದಲ ಎರಡು ವರ್ಷಗಳಲ್ಲಿ ಲಾಭ ಕಡಿಮೆ ಇದ್ದರೂ ಮೂರನೇ ವರ್ಷದಿಂದ 6-7 ಲಕ್ಷ ರೂ. ನಿಷ್ಕರ್ಷಿಸಲಾಗುತ್ತದೆ ಎಂದರು.
ರೈತರಿಗೆ ಲ್ಯಾಬ್‌ನಿಂದ ಲ್ಯಾಂಡ್‌ಗೆ ತಕ್ಷಣ ಮಾಹಿತಿ ತಲುಪಬೇಕು. ಕೃಷಿಯಲ್ಲಿ 5.4% ಜಿಡಿಪಿ ಕೊಡುಗೆ ಇದೆ. ಇದು ಅತ್ಯಂತ ಶ್ಲಾಘನೀಯ ಬೆಳವಣಿಗೆ. ನಕಲಿ ಮತ್ತು ನಿಖರತೆಯಿಲ್ಲದ ಕೀಟನಾಶಕಗಳ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಸಿದ್ಧ. ‘ಒಂದು ರಾಷ್ಟ್ರ – ಒಂದು ಕೃಷಿ – ಒಂದು ತಂಡ’ ಎಂಬ ದೃಷ್ಟಿಕೋನದೊಂದಿಗೆ ಕಾರ್ಯ ನಿರ್ವಹಣೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಬೆಂಗಳೂರು ಗ್ರಾಮೀಣ ಪ್ರದೇಶವು ತೋಟಗಾರಿಕಾ ವಲಯದಲ್ಲಿ ವಿಶೇಷ ಸಾಧನೆ ತೋರಿದೆ. ಸಂಶೋಧನೆಗಳಿಗೆ ರೈತರಿಗೆ ತಕ್ಷಣ ಅವಕಾಶ ಲಭ್ಯವಾಗಬೇಕು. ರೈತರು ಈಗ ವಿಜ್ಞಾನಿಗಳು ಕೂಡ. ಕೃಷಿಯಲ್ಲಿ ಹೊಸ ಆಯಾಮ ಸೇರಿಸುತ್ತಿದ್ದಾರೆ. ಜಿಡಿಪಿಯಲ್ಲಿ ಕೃಷಿಯ ದೊಡ್ಡ ಪಾತ್ರವಿದೆ. ಪೋಷಕ ಆಹಾರದ ಮೂಲಕ ಆಹಾರ ಭದ್ರತೆ ಸಾಧಿಸುವ ಗುರಿ ಹೊಂದಲಾಗಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಕಲಿ ಬೀಜ ಹಾಗೂ ಕೀಟನಾಶಕ ತಯಾರಕರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುತ್ತಿದೆ. 145 ಕೋಟಿ ಜನಸಂಖ್ಯೆಗೆ ಪೋಷಕ ಆಹಾರ ಪೂರೈಕೆ ಗುರಿ ಹೊಂದಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
29 ಮೇ 2025ರಂದು ಒಡಿಶಾದಿಂದ ಆರಂಭವಾದ ಈ 15 ದಿನಗಳ ಅಭಿಯಾನ 12 ಜೂನ್‌ವರೆಗೆ ನಡೆಯಲಿದೆ. ಈಗಾಗಲೇ ಈ ಅಭಿಯಾನದ 11 ದಿನಗಳಲ್ಲಿ ಅವರು ಒಡಿಶಾ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಪಂಜಾಬ್, ಉತ್ತರಾಖಂಡ್ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ರೈತರನ್ನು ಭೇಟಿಯಾಗಿ ಸಂವಾದ ನಡೆಸಿದ್ದಾರೆ ಎಂದು ತಿಳಿಸಿದರು.
ಆರು ತಿಂಗಳಿಗೊಮ್ಮೆ ಚುನಾವಣೆಯಿಂದ ದೇಶಕ್ಕೆ ಅಪಾರ ನಷ್ಟ: ಮತ್ತೊಂದೆಡೆ, ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ‘ಒಂದು ದೇಶ ಒಂದು ಚುನಾವಣೆ’ ವಿಷಯದ ಕುರಿತು ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಶಿವರಾಜ್ ಸಿಂಗ್ ಚೌಹಾಣ್, ರಾಜಕೀಯ ಪಕ್ಷಗಳು ಆರು ತಿಂಗಳಿಗೆ ಒಮ್ಮೆ ಒಂದಲ್ಲ ಒಂದು ಚುನಾವಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಕಾರಣ ದೇಶಕ್ಕೆ ಅಪಾರ ನಷ್ಟವಾಗುತ್ತಿದೆ ಎಂದು ಅಭಿಪ್ರಾಯ

ಸಚಿವರು, ಶಾಸಕರು, ಸಂಸದರು ಒಂದಲ್ಲ ಒಂದು ಚುನಾವಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅನಿವಾರ್ಯವಾಗುತ್ತಿದೆ. ಪ್ರಧಾನ ಮಂತ್ರಿಯವರೂ ಚುನಾವಣಾ ಕಣಕ್ಕೆ ಪ್ರಚಾರಕ್ಕೆ ಹೋಗಬೇಕಾಗುತ್ತದೆ. ಚುನಾವಣೆಯಲ್ಲಿ ಬಳಸುವ ಹಣ, ಮಾನವ ಸಂಪನ್ಮೂಲವನ್ನು ಜನಕಲ್ಯಾಣ, ಅಭಿವೃದ್ಧಿಯಲ್ಲಿ ತೊಡಗಿಸಿದರೆ ಎಷ್ಟು ಪ್ರಯೋಜನ ಆದೀತು ಎಂದು ಯೋಚಿಸಿ ನೋಡಿ ಎಂದು ಮನವಿ ಮಾಡಿದರು.
ದೇಶದಲ್ಲಿ ಈಗ ಪ್ರತಿಯೊಂದು ಪಕ್ಷವು 5 ವರ್ಷ, 12 ತಿಂಗಳು, 30 ದಿನ, 24 ಗಂಟೆ ಅಂದರೆ ನಿರಂತರವಾಗಿ ತನ್ನನ್ನು ಚುನಾವಣೆಯಲ್ಲಿ ತೊಡಗಿಸಿಕೊಳ್ಳುವ ಸ್ಥಿತಿ ಇದೆ. ಮಾದರಿ ನೀತಿ ಸಂಹಿತೆಯಿಂದ ಎಲ್ಲ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗುತ್ತಿವೆ. ದೂರಕಾಲೀನ, ದೂರದೃಷ್ಟಿಯುಳ್ಳ ನಿರ್ಧಾರ ಮಾಡಲೂ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
ಮಧ್ಯಪ್ರದೇಶ, ಛತ್ತೀಸ್‍ಗಡ, ರಾಜಸ್ಥಾನ ರಾಜ್ಯಗಳ ಚುನಾವಣೆ ನಡೆದು 4 ತಿಂಗಳಾಗಿರಲಿಲ್ಲ; ನಾನಾಗ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದೆ. ನೀತಿ ಸಂಹಿತೆಯಿಂದ ನಮಗೆ ಅಭಿವೃದ್ಧಿ ಕೆಲಸ ಮಾಡುವುದೇ ಕಷ್ಟಕರವಾಗುತ್ತಿತ್ತು. ನಂತರ ಸಂಸತ್ ಚುನಾವಣೆ ನಡೆಯಿತು. ಮೋದಿ ಅವರ ಮೂರನೇ ಅವಧಿಯ ಸಚಿವ ಸಂಪುಟದಲ್ಲಿ ನಾನೂ ಸಚಿವನಾದೆ. ಕೃಷಿ, ಗ್ರಾಮೀಣ ಅಭಿವೃದ್ಧಿ ಸಚಿವನಾಗಿ ಅಧಿಕಾರ ವಹಿಸಿಕೊಂಡೆ. ಸ್ವಲ್ಪ ದಿನಗಳ ಬಳಿಕ ಜಾರ್ಖಂಡ್ ಚುನಾವಣಾ ಉಸ್ತುವಾರಿಯಾಗಿ ಪಕ್ಷ ನಿಯೋಜಿಸಿತು. ವ್ಯವಸಾಯ, ರೈತ ಮತ್ತು ಕೃಷಿ ಇಲಾಖೆ ಖಾತೆ ಬಿಟ್ಟು ನಾನು ಜಾರ್ಖಂಡ್‍ಗೆ ಓಡಬೇಕಾಯಿತು ಎಂದು ತಿಳಿಸಿದರು.
ಜಾರ್ಖಂಡ್, ಹರಿಯಾಣ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳ ಸಂಸದರು, ಸಚಿವರು, ಮುಖ್ಯಮಂತ್ರಿ, ವಿವಿಧ ಪಕ್ಷಗಳ ಮುಖಂಡರು ಬೇರೆಲ್ಲ ಕೆಲಸ ಬಿಟ್ಟು ಚುನಾವಣಾ ಕಣಕ್ಕೆ ಧುಮುಕಿದ್ದರು. ಇದರ ಬಳಿಕ ದೆಹಲಿ ಚುನಾವಣೆ ಬಂತು. ದೆಹಲಿ ಚುನಾವಣೆ ಮುಗಿಯುತ್ತಿದ್ದಂತೆ ಬಿಹಾರದ ಚುನಾವಣೆ ಬರುತ್ತಿದೆ. ಪಶ್ಚಿಮ ಬಂಗಾಳದಲ್ಲೂ ಚುನಾವಣಾ ಸಿದ್ಧತೆ ಆರಂಭಗೊಂಡಿದೆ. ರಾಷ್ಟ್ರದ ನಾಗರಿಕರ ನೆಲೆಯಲ್ಲಿ ಈ ಚುನಾವಣಾ ಪ್ರಕ್ರಿಯೆಗಳನ್ನು ಗಂಭೀರವಾಗಿ ಯೋಚಿಸಿ ನೋಡಿ ಎಂದು ಅವರು ಮನವಿ ಮಾಡಿದರು.
