ಗೋವಿಂದರಾಜ್‌ ಎಸಗಿದ ತಪ್ಪನ್ನು ಜನರ ಮುಂದೆ ಹೇಳಿ – ಗಾಢ ಮೌನಕ್ಕೆ ಜಾರಿದ್ದು ಯಾಕೆ: ‘ಸಿಎಂಗೆ ಸುನಿಲ್‌ ಕುಮಾರ್‌ ಪ್ರಶ್ನೆ’

ಬೆಂಗಳೂರು: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಕೆ.ಗೋವಿಂದರಾಜ್‌ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿದ್ದರಿಂದ ಸಿದ್ದರಾಮಯ್ಯನವರು ಕಾಲ್ತುಳಿತ ಪ್ರಕರಣದಲ್ಲಿ ಹೊಣೆಗಾರರು ಎಂದು ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಆರ್‌ಸಿಬಿ ವಿಜಯೋತ್ಸವ ಆಚರಣೆಗೆ ಅವಕಾಶ ನೀಡಿದರೆ ಬಂದೋಬಸ್ತ್‌ಗೆ ಸಮಸ್ಯೆಯಾಗುತ್ತದೆ ಎಂದು ವಿಧಾನಸೌಧದ ಡಿಸಿಪಿ ಕರಿಬಸವನಗೌಡ ಅವರು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಕಾರ್ಯದರ್ಶಿ ಸತ್ಯವತಿ ಅವರಿಗೆ ಬರೆದ ಪತ್ರ ಬಹಿರಂಗವಾದ ಬೆನ್ನಲ್ಲೇ ಸುನಿಲ್‌ ಕುಮಾರ್‌ ಅವರು ಎಕ್ಸ್‌ನಲ್ಲಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?
ನಿಮ್ಮ ಸಯಾಮಿಯಂತೆ ಸದಾ ಅಂಟಿಕೊಂಡೇ ಇರುತ್ತಿದ್ದ ಕೆ.ಗೋವಿಂದರಾಜ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆಗೊಳಿಸಿದ್ದೇಕೆ?

ಗೋವಿಂದರಾಜ್ ಕೊಟ್ಟ ಸಲಹೆ ಆಧರಿಸಿ ಈ ಕಾರ್ಯಕ್ರಮ ನಡೆದಿದೆ ಎಂದಾದರೆ ಅದಕ್ಕೆ ನೀವೇ ಹೊಣೆಗಾರರಾಗುತ್ತೀರಿ ಎಂಬ ಭಯಕ್ಕಾ? ನಿಮ್ಮ ಪಕ್ಕದಲ್ಲೇ ಕುಳಿತು ಈ ನರಹತ್ಯೆಯ ಚಿತ್ರಕತೆ ಬರೆದರೆಂಬ ಕಾರಣಕ್ಕಾ? 

ಸಾಲು ಸಾಲು ಹೆಣಗಳು ಬಿದ್ದ ಮೇಲೂ ಮಸಾಲೆ ದೋಸೆ ಮೆಲ್ಲುವುದಕ್ಕೆ ಕರೆದೊಯ್ದರು ಎಂಬ ಕಾರಣಕ್ಕೋ? ಅಥವಾ ಇದೆಲ್ಲವನ್ನು ಮೀರಿದ ಉನ್ನತ ಸಲಹೆಗಾಗಿಯೋ?

ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮೇಲೆ ಸನ್ಮಾನ ಕಾರ್ಯಕ್ರಮ ಬೇಡ, ವಿಜಯೋತ್ಸವವೂ ಬೇಡ ಎಂದು ಡಿಪಿಎಆರ್ ಕಾರ್ಯದರ್ಶಿಗೆ ಪೊಲೀಸರು ಪತ್ರ ಬರೆದಿದ್ದರು. ಆದರೂ ಈ ದುರಂತಕ್ಕೆ ಅವರನ್ನು ಹೊಣೆಗಾರರಾಗಿಸಿ ಅಮಾನತು ಮಾಡುವಾಗ ಕಾರಣಗಳ ಸರಮಾಲೆಯನ್ನೇ ಕೊಟ್ಟಿರಿ. ಆದರೆ ಗೋವಿಂದರಾಜ್ ವಿಚಾರದಲ್ಲಿ ಮಾತ್ರ ಏಕೆ ಮಗುಮ್ಮಾದ ಆದೇಶ ಹೊರಡಿಸಿದಿರಿ?

ಅಷ್ಟಕ್ಕೂ ಗೋವಿಂದರಾಜ್ ಎಸಗಿದ ತಪ್ಪೇನು ಎಂಬುದು ಜನರ ಮುಂದೆ ಅನಾವರಣವಾಗಬೇಕಲ್ಲವೇ ? ಅದನ್ನು ಸಾಧ್ಯಂತವಾಗಿ ವಿವರಿಸುವುದು ನಿಮ್ಮ ಕರ್ತವ್ಯವಲ್ಲವೇ ?

ಗೋವಿಂದ ರಾಜ್ ಗೇಟ್ ಪಾಸ್‌ಗೆ ಸಕಾರಣ ನೀಡಿದರೆ ಈ ಸಾವಿನ ಮೆರವಣಿಗೆಯ ಸತ್ಯ ಹೊರ ಬೀಳುತ್ತದೆ ಎಂದು ನೀವು ಗಾಢ ಮೌನಕ್ಕೆ ಜಾರಿದ್ದೀರಾ? ವಿಪಕ್ಷ, ಮಾಧ್ಯಮದ ಪ್ರಶ್ನೆಗೆ ಎಲ್ಲಿ ಸಾಕ್ಷಿ ಕೊಡು ಎಂದು ಮುಗಿ ಬೀಳುತ್ತಿದ್ದ ನೀವು ಈಗ ಇಡಿ ರಾಜ್ಯವೇ ಕಾರಣ ಕೇಳುತ್ತಿದ್ದರೂ ಬಾಯಿ ಬಿಗಿದು ಕುಳಿತಿದ್ದೇಕೆ ?

11 ಜನರ ಸಾವಿನ ಸಂಚು ಬಯಲಾಗುತ್ತದೆ ಎಂಬ ಭಯವೇ ? ಎಷ್ಟೇ ಬಚ್ಚಿಟ್ಟರೂ ಕಾಡುವ ಆತ್ಮಸಾಕ್ಷಿಗೆ ವಂಚನೆ ಮಾಡಲು ಸಾಧ್ಯವೇ? ಈ ಹಿಂದೆ ನಿಮ್ಮ ಅಧೀನದಲ್ಲೇ ಬರುವ ಹಣಕಾಸು ಇಲಾಖೆಯ ಮೂಲಕ ಆದ ವಾಲ್ಮೀಕಿ ನಿಗಮದ ಅವ್ಯವಹಾರ ಸಂಬಂಧ ಯಾರನ್ನೋ ಬಲಿಪಶು ಮಾಡಿದಿರಿ. ಈಗ ನಿಮ್ಮದೇ ಅಧೀನದಲ್ಲಿ ಬರುವ ಡಿಪಿಎಆರ್ ಇಲಾಖೆ ಮೂಲಕ ಆದ ತಪ್ಪಿಗೆ ಇನ್ಯಾರನ್ನೋ ಬಲಿಪಶು ಮಾಡುತ್ತೀರಾ?