
ನವದೆಹಲಿ: ಇಂದು ವಿಶ್ವ ಪರಿಸರ ದಿನ. ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದ ಅಂಗಳದಲ್ಲಿ ವಿಶೇಷವಾದ ಸಿಂಧೂರ ಸಸಿ ನೆಟ್ಟರು. ಈ ಸಸಿಯನ್ನು 1971ರ ಯುದ್ಧದಲ್ಲಿ ಅಪ್ರತಿಮ ಧೈರ್ಯ ತೋರಿದ್ದ ಮಹಿಳಾ ಗುಂಪೊಂದು ಪ್ರಧಾನಿ ಅವರಿಗೆ ಇತ್ತೀಚಿಗೆ ನೀಡಿದ್ದರು. ಈ ಸಸಿಯನ್ನು ನೆಡುವ ಮೂಲಕ ಮೋದಿ ಅವರು ಆಪರೇಷನ್ ಸಿಂಧೂರ್ಗೆ ವಿಶೇಷ ಗೌರವವನ್ನು ಸಲ್ಲಿಸಿದರು.
ಈ ಸಸಿ ನೆಟ್ಟ ಕುರಿತು ಎಕ್ಸ್ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ಅವರು, ಈ ಸಸಿಯು ಮಹಿಳೆಯರ ಶೌರ್ಯ ಮತ್ತು ಸ್ಫೂರ್ತಿಯ ದೃಢವಾದ ಸಂಕೇತವಾಗಿದೆ ಎಂದು ಬಣ್ಣಿಸಿದ್ದಾರೆ.
ಕಚ್ ಕಾರ್ಯಕ್ರಮದಲ್ಲಿ ಸಸಿ ನೀಡಿದ್ದ ವೀರ ವನಿತೆಯರು: ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಪ್ರವಾಸ ಕೈಗೊಂಡಿದ್ದರು. ಕಚ್ ಕಾರ್ಯಕ್ರಮದಲ್ಲಿ ಭಾಗಿಯಾದ ಅವರಿಗೆ 1971ರ ಯುದ್ದದಲ್ಲಿ ಧೈರ್ಯ ತೋರಿದ್ದ ಮಹಿಳೆಯರ ಗುಂಪೊಂದು ಸಸಿಯನ್ನು ಉಡುಗೊರೆಯಾಗಿ ನೀಡಿದ್ದರು. ಈ ಸಸಿಯನ್ನು ತಮ್ಮ 7, ಲೋಕ್ ಕಲ್ಯಾಣ್ ಮಾರ್ಗ್ ನಿವಾಸದಲ್ಲಿ ನೆಡುವುದಾಗಿ ಭರವಸೆಯನ್ನು ಮೋದಿ ನೀಡಿದ್ದರು.
ಈ ಸಸಿ ನೆಡುವುದು ಕೂಡ ಪಹಲ್ಗಾಮ್ ಉಗ್ರರ ದಾಳಿಯಲ್ಲಿ ನಡೆದ ಹತ್ಯೆಗಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಸರ್ಕಾರ ಸೇನಾ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಎಂಬ ಹೆಸರನ್ನು ಇಟ್ಟಷ್ಟೇ ಮಹತ್ವ ಮತ್ತು ಬದ್ಧತೆಯನ್ನು ಹೊಂದಿದೆ.
ಪರಿಸರ ರಕ್ಷಣೆಗೆ ಕರೆ: ಪರಿಸರ ದಿನದ ಹಿನ್ನೆಲೆ ಸಸಿ ನೆಟ್ಟು ವಿಡಿಯೋ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ಪ್ರತಿಯೊಂದು ದೇಶವು ಜಾಗತಿಕ ಹವಾಮಾನ ರಕ್ಷಣೆಗಾಗಿ ಸ್ವಹಿತಾಸಕ್ತಿಯನ್ನು ಮೀರಿ ಮುಂದೆ ಬರಬೇಕು. ಈ ವರ್ಷ ವಿಶ್ವ ಪರಿಸರ ದಿನದಂದು ಪ್ಲಾಸ್ಟಿಕ್ ಮಾಲಿನ್ಯ ಅಂತ್ಯಗೊಳಿಸುವ ಧ್ಯೇಯವನ್ನು ಹೊಂದಲಾಗಿದೆ. ಭಾರತ ಕೂಡ ಕಳೆದ ನಾಲ್ಕರಿಂದ ಐದು ವರ್ಷಗಳಿಂದ ಈ ಕುರಿತು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ.
ಮಿಷನ್ ಲೈಫ್ ಮೂಲಕ ಸಂಪನ್ಮೂಲಗಳ ಎಚ್ಚರಿಕೆಯ ಬಳಕೆ ಮತ್ತು ಸುಸ್ಥಿರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಜಾಗತಿಕ ಆಂದೋಲನವಾಗಿದ್ದು, ಲಕ್ಷಾಂತರ ಜನರು ಪ್ರತಿನಿತ್ಯದ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ತಗ್ಗಿಸುವ, ಮರು ಬಳಕೆ ಮಾಡುವುದನ್ನು ಮಂತ್ರವಾಗಿಸಿಕೊಂಡಿದ್ದಾರೆ ಎಂದರು.
ಇದೇ ವೇಳೆ ಜನರು ಭೂಮಿಯನ್ನು ರಕ್ಷಣೆ ಮಾಡುವ ಪ್ರಯತ್ನಕ್ಕೆ ಪರಿಸರದ ಸವಾಲುಗಳನ್ನು ಎದುರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು. ನಮ್ಮ ಪರಿಸರವನ್ನು ಹಸಿರಾಗಿಡಲು ಮತ್ತು ಉತ್ತಮಗೊಳಿಸಲು ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ತಳಮಟ್ಟದ ಕಾರ್ಯಕರ್ತರಿಗೆ ಅಭಿನಂದಿಸುವುದಾಗಿ ಪ್ರಧಾನಿ ತಿಳಿಸಿದರು.

