ʼಹೇಮಾವತಿ ಲಿಂಕ್ ಕೆನಾಲ್ʼ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ -ನಾಲ್ವರ ಬಂಧನ

ತುಮಕೂರು : ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ನಡೆಯುತ್ತಿರುವ ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ಸುತ್ತಮುತ್ತ ವಿಧಿಸಲಾಗಿದ್ದ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದ ಆರೋಪದ ಮೇಲೆ ನೂರಕ್ಕೂ ಹೆಚ್ಚು ಹೋರಾಟಗಾರರ ವಿರುದ್ಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಎಫ್‌ಐರ್‌ ದಾಖಲಾಗಿದೆ. ಈ ಹಿನ್ನೆಲೆ ಸದ್ಯ ನಾಲ್ವರನ್ನು ಪೊಲೀಸರು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನವಚೇತನ್ ಸೇರಿ ನಾಲ್ವರನ್ನು ಗುಬ್ಬಿ ಪೊಲೀಸರು ಬಂಧಿಸಿದ್ದಾರೆ. ಯುವಮೋರ್ಚಾ ಅಧ್ಯಕ್ಷ ನವಚೇತನ್, ಚೇತನ್ ಬೊಮ್ಮರನಹಳ್ಳಿ, ಬೆಣಚಗೆರೆ ಲೋಕಿ ಹಾಗೂ ಕೌಶಿಕ್, ಸಿ. ಎಸ್ ಪುರ ಅವರನ್ನು ಬಂಧಿಸಿರುವ ಮಾಹಿತಿ ನೀಡಿದ್ದಾರೆ.

ನಾಲ್ವರ ವಿರುದ್ಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಕಳೆದ ಶನಿವಾರ ನಡೆದ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಹೋರಾಟದಲ್ಲಿ ನಾಲ್ವರು ಭಾಗಿಯಾಗಿದ್ದರು.

ಈ ನಾಲ್ವರನ್ನು ಪೊಲೀಸರು ಬಂಧಿಸಿ ಗುಬ್ಬಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕಾಂಟ್ರ್ಯಾಕ್ಟ್ ಪಡೆದ ಕಂಪನಿಯ ಸಿಬ್ಬಂದಿ ದೂರು ನೀಡಿದ ಮೇರೆಗೆ ಬಿಜೆಪಿ, ಜೆಡಿಎಸ್ ಶಾಸಕರು ಮತ್ತು ಹೋರಾಟಗಾರರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಎ1 ತುರುವೇಕೆರೆ ಜೆಡಿಎಸ್ ಶಾಸಕ ಕೃಷ್ಣಪ್ಪ ಎಂ. ಟಿ.
ಎ2 ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ.
ಎ3 ತುಮಕೂರು ನಗರ ಬಿಜೆಪಿ ಶಾಸಕ ಜ್ಯೋತಿಗಣೇಶ್.
ಎ4 ಬಿಜೆಪಿ ಮಾಜಿ ಸಚಿವ ಸೊಗಡು ಶಿವಣ್ಣ.
ಎ5 ಜಿಲ್ಲಾ ರೈತ ಸಂಘದ ಅಧ್ಯಕ್ಷ ಗೊವಿಂದರಾಜು.
ಎ6 ಬಿಜೆಪಿ ಮುಖಂಡ ದಿಲೀಪ್ ಕುಮಾರ್.
ಎ7 ಚೇತನ್ ಹಾಗೂ ಎ8 ಇತರ 25 ರಿಂದ 30 ಮಂದಿ ಎಂದು ಎಫ್​ಐಆರ್​ನಲ್ಲಿ ಉಲ್ಲೇಖ ಮಾಡಲಾಗಿದೆ. ಆರೋಪಿಗಳಿಂದ 34.65 ಲಕ್ಷ ಮೌಲ್ಯದ ಆಸ್ತಿಗಳಿಗೆ ಹಾನಿಯಾಗಿದೆ ಎಂದು ಎಫ್ಐಆರ್​​ನಲ್ಲಿ ವಿವರಿಸಲಾಗಿದೆ.

ಎಫ್​ಐಆರ್​ನಲ್ಲಿ ಮುಖ್ಯವಾಗಿ ನಿಷೇಧಾಜ್ಞೆ ಉಲ್ಲಂಘನೆ, ಕೊಲೆಯತ್ನ, ಸರ್ಕಾರಿ ಕೆಲಸಕ್ಕೆ ಅಡ್ಡಿ, ಸರ್ಕಾರಿ ಆಸ್ತಿಪಾಸ್ತಿ ಹಾನಿ, ಖಾಸಗಿ ಆಸ್ತಿಪಾಸ್ತಿಗೆ ಹಾನಿ, ಕಲ್ಲು ತೂರಾಟ, ಅಧಿಕಾರಿಗಳ ಮೇಲೆ ಹಲ್ಲೆ ಸೇರಿದಂತೆ ವಿವಿಧ ಸ್ವರೂಪದ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರಿನಿಂದ ಕಾಮಗಾರಿ ಆರಂಭವಾಗಿದ್ದು, ಡಿ ರಾಂಪುರದವರೆಗೂ ನಡೆದ ವಿವಿಧ ಘಟನೆಗಳನ್ನು ಪೊಲೀಸರು ಪಟ್ಟಿ ಮಾಡಿದ್ದಾರೆ.