
ವಿಜಯಪುರ: ಈರುಳ್ಳಿ ದರ ದಿಢೀರ್ ಕುಸಿತ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಗೆ ಈರುಳ್ಳಿ ಸುರಿದು ರೈತ ಹೊರಳಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.ಈ ವೇಳೆ ಸರ್ಕಾರ ಹಾಗೂ ದಲ್ಲಾಳಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಘಟನೆ ನಡೆದಿದೆ
ಈರುಳ್ಳಿ ದರ ತೀವ್ರ ಕುಸಿತ ಹಿನ್ನೆಲೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಕುಪಕಡ್ಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ರೈತರು ಈರುಳ್ಳಿ ರಾಶಿ ಸುರಿದು ಪ್ರತಿಭಟನೆ ಮಾಡಿದ್ದಾರೆ. ಕುಪಕಡ್ಡಿ ಬಳಿಯ ತೋಟಗಾರಿಕೆ ಎಫ್ಪಿಒ ಆವರಣದಲ್ಲಿ ಈರುಳ್ಳಿ ಸುರಿದು ಪ್ರತಿಭಟನೆ ಮಾಡಲಾಗಿದೆ. ಉತ್ತಮ ಗುಣಮಟ್ಟದ ಈರುಳ್ಳಿ ಕ್ವಿಂಟಾಲ್ಗೆ ಕೇವಲ 200 ರೂಪಾಯಿಗೆ ಹರಾಜಾಗುತ್ತಿದೆ. ಕಡಿಮೆ ದರಕ್ಕೆ ಹರಾಜಾದ ಕಾರಣ ಈರುಳ್ಳಿ ಬೆಳೆಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಮೇಲೆ ಈರುಳ್ಳಿ ಸುರಿದು ಬಿದ್ದು ಮಲ್ಲಿಕಾರ್ಜುನ ಬೋಲಗೊಂಡ ಎಂಬ ರೈತ ಹೊರಳಾಡಿದ್ದಾರೆ. ಇದೇ ಈರುಳ್ಳಿ ಬಾಗಲಕೋಟೆಯಲ್ಲಿ ಕ್ವಿಂಟಾಲ್ಗೆ 1000 ರೂಪಾಯಿಗೆ ಮಾರಾಟವಾಗಿತ್ತು. ಡಿಎಪಿ ರಸಗೊಬ್ಬರ 1200 ರೂ., ಯೂರಿಯಾ 300 ರೂ. ಇದೆ. ನಾವು ಕಷ್ಟಪಟ್ಟು ಬೆಳೆದ ಈರುಳ್ಳಿಗೆ ಕೇವಲ 200 ರೂ. ಯಾಕೆಂದು ಪ್ರಶ್ನೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಈ ಕುರಿತು ಗಮನ ಹರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ



