ಏಕದಿನಕ್ಕೆ ಆಸೀಸ್‌ ಆಲ್‌ರೌಂಡರ್‌ ಮ್ಯಾಕ್ಸ್‌ವೆಲ್‌ ದಿಢೀರ್‌ ನಿವೃತ್ತಿ

ಮೆಲ್ಬರ್ನ್‌: ಆಸ್ಟ್ರೇಲಿಯಾದ ಆಲ್‌ರೌಂಡರ್ 36 ವರ್ಷದ ಗ್ಲೆನ್ ಮ್ಯಾಕ್ಸ್‌ವೆಲ್ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಗೆ ನಿವೃತ್ತಿ ಹೇಳಿದ್ದಾರೆ.

2026 ರಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್‌ ಕ್ರಿಕೆಟ್‌ ಗಮನದಲ್ಲಿಟ್ಟುಕೊಂಡು ಫೈನಲ್ ವರ್ಡ್ ಪಾಡ್‌ಕ್ಯಾಸ್ಟ್‌ನಲ್ಲಿ ಮ್ಯಾಕ್ಸ್‌ವೆಲ್‌ ಮಹತ್ವದ ನಿವೃತ್ತಿ ನಿರ್ಧಾರ ಪ್ರಕಟಿಸಿದರು.

ಮ್ಯಾಕ್ಸ್‌ವೆಲ್‌ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಹೇಳಿಲ್ಲ. ಆದರೆ ಕೊನೆಯ ಬಾರಿಗೆ ಮ್ಯಾಕ್ಸ್‌ವೆಲ್‌ ಟೆಸ್ಟ್‌ ಆಡಿದ್ದು 2017 ರಲ್ಲಿ. ನಂತರ ಅವರು ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆ ಆಗಿಲ್ಲ.

ಒಟ್ಟು 149 ಏಕದಿನ ಪಂದ್ಯವಾಡಿರುವ ಮ್ಯಾಕ್ಸ್‌ವೆಲ್‌ 136 ಇನ್ನಿಂಗ್ಸ್‌ಗಳಿಂದ 33.81 ಸರಾಸರಿಯಲ್ಲಿ 3,990 ರನ್‌ ಹೊಡೆದಿದ್ದಾರೆ. ಈ ಆಟದಲ್ಲಿ 4 ಶತಕ, 23 ಅರ್ಧಶತಕ ಬಾರಿಸಿದ್ದಾರೆ. 77 ವಿಕೆಟ್‌ ಪಡೆದಿದ್ದಾರೆ.

ಮ್ಯಾಕ್ಸ್‌ವೆಲ್‌ ಹಲವು ನೆನಪಿನಲ್ಲಿ ಉಳಿಯುವ ಆಟವಾಡಿದ್ದಾರೆ. 2023ರ ವಿಶ್ವಕಪ್‌ನ ಮುಂಬೈನಲ್ಲಿ ನಡೆದ ಲೀಗ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಅಫ್ಘಾನಿಸ್ತಾನ 5 ವಿಕೆಟ್‌ ನಷ್ಟಕ್ಕೆ 291 ರನ್‌ ಗಳಿಸಿತ್ತು. ನಂತರ ಬ್ಯಾಟ್‌ ಬೀಸಿದ್ದ ಆಸ್ಟ್ರೇಲಿಯಾ 91 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮುರಿಯದ 8ನೇ ವಿಕೆಟಿಗೆ ಮ್ಯಾಕ್ಸ್‌ವೆಲ್‌ ಮತ್ತು ಪ್ಯಾಟ್‌ ಕಮ್ಮಿನ್ಸ್‌ 170 ಎಸೆತಗಳಲ್ಲಿ 202 ರನ್‌ ಜೊತೆಯಾಟವಾಡಿದ್ದರು. ಈ ಪಂದ್ಯದಲ್ಲಿ ಮ್ಯಾಕ್ಸ್‌ ಔಟಾಗದೇ 201 ರನ್‌(128 ಎಸೆತ, 21 ಬೌಂಡರಿ, 10 ಸಿಕ್ಸ್‌ ) ಸಿಡಿಸಿದ್ದರು.

ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸಿದ್ದ ಮ್ಯಾಕ್ಸ್‌ವೆಲ್‌ 8 ಪಂದ್ಯಗಳಿಂದ 48 ರನ್‌ ಹೊಡೆದಿದ್ದರು. ಪಂದ್ಯದ ಮಧ್ಯೆ ಕೈ ಬೆರಳಿಗೆ ಗಾಯವಾಗಿದ್ದರಿಂದ ಮ್ಯಾಕ್ಸ್‌ವೆಲ್‌ ತಂಡವನ್ನು ತೊರೆದಿದ್ದರು.