ಹೈವೇಯಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಹರಿದ ಟ್ಯಾಂಕರ್: ಸ್ಥಳದಲ್ಲೇ ಮೂವರು ಕಾರ್ಮಿಕರು ಸಾವು

ಬೆಳಗಾವಿ: ಕೆಲಸ ಮಾಡುತ್ತಿರುವಾಗಲೇ ಟ್ಯಾಂಕರ್ ಹರಿದು ಮೂವರು ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ಇಟಗಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ರಭಸವಾಗಿ ಟ್ಯಾಂಕರ್‌ ಅಪ್ಪಳಿಸಿದ್ದು, ಮೂವರೂ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಇತರ ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿತ್ತೂರು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

ರಮೇಶ್, ರಾಮಚಂದ್ರ ಹಾಗೂ ರಾಮಣ್ಣ ಎಂಬವರು ಮೃತ ದುರ್ದೈವಿಗಳು. ಗಾಯಾಳುಗಳನ್ನು ಲಕ್ಷ್ಮಿಬಾಯಿ, ಅನುಶ್ರೀ ಹಾಗೂ ಭೀಮಾಬಾಯಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರು ಹಾಗೂ ಗಾಯಾಳುಗಳು ಕಲಬುರಗಿ ಮೂಲದವರೆಂಬ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ಗೊತ್ತಾಗಬೇಕಿದೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.