ಗೆಲುವಿನ ಸಂಭ್ರಮಾಚರಣೆ ವೇಳೆ ಹುಚ್ಚಾಟ – 8 ಮಂದಿ RCB ಫ್ಯಾನ್ಸ್ ಅರೆಸ್ಟ್

ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಹುಚ್ಚಾಟ ಮೆರೆದಿದ್ದ ಎಂಟು ಜನ ಆರ್‌ಸಿಬಿ ಅಭಿಮಾನಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪಟಾಕಿ ಹೊಡೆಯುವ ವೇಳೆ ಪೆಟ್ರೋಲ್ ಬಳಸಿ ಭಾರೀ ಸ್ಫೋಟ ಸೃಷ್ಟಿಸಿ ಯುವಕರು ಹುಚ್ಚಾಟ ಮೆರೆದಿದ್ದರು. ಈ ಹಿನ್ನೆಲೆ ಗುರುರಾಜ, ಹಜರತ್, ರಮೇಶ್, ದೇವಯ್ಯ ಸೇರಿ 8 ಜನರನ್ನು ಬಂಧಿಸಲಾಗಿದೆ. ಆರ್‌ಸಿಬಿ ಫೈನಲ್‌ಗೆ ಹೋಗಿದ್ದಕ್ಕೆ ಹಸಮಕಲ್ ಗ್ರಾಮದ ಮುಖ್ಯ ರಸ್ತೆಯಲ್ಲಿ ಯುವಕರು ಸಂಭ್ರಮಾಚರಣೆ ಮಾಡಿದ್ದರು.

ಈ ವೇಳೆ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಪಟಾಕಿ ಇಟ್ಟು, ಪೆಟ್ರೋಲ್ ತುಂಬಿ, ಮೈದಾ ಹಿಟ್ಟು ಬಳಸಿ ಸ್ಫೋಟಿಸಿದ್ದರು. ಯುವಕರ ಹುಚ್ಚಾಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆ ಸಿಂಧನೂರಿನ ಬಳಗಾನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಂಟು ಜನರನ್ನು ಅರೆಸ್ಟ್ ಮಾಡಿದ್ದಾರೆ.