
ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 60ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಜಿಲ್ಲೆಗಳ ಡಿಡಿಪಿಐಗಳಿಗೆ (ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು) ನೋಟಿಸ್ ಜಾರಿ ಮಾಡುವಂತೆ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಆದೇಶಿಸಿದರು.
ವಿಧಾನಸೌಧದಲ್ಲಿ ಶನಿವಾರ ಮುಂದುವರೆದ ರಾಜ್ಯ ಪ್ರಗತಿ ಪರಿಶೀಲನೆ ಕುರಿತ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳ ಸಭೆಯಲ್ಲಿ ಸಿಎಂ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶದ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದರು. “ವಿವರಣೆ ಕೋರಿ ಡಿಡಿಪಿಐಗಳಿಗೆ ನೋಟಿಸ್ ನೀಡಿ. ಅವರ ವಿವರಣೆ ತೃಪ್ತಿಕರವಾಗಿಲ್ಲ ಎಂದು ಕಂಡುಬಂದರೆ ಅಂತಹ ಡಿಡಿಪಿಐಗಳ ವಿರುದ್ಧ ಕ್ರಮ ಕೈಗೊಳ್ಳಿ” ಎಂದು ಮುಖ್ಯಮಂತ್ರಿ ಸೂಚಿಸಿದರು.
35 ಶೈಕ್ಷಣಿಕ ಜಿಲ್ಲೆಗಳಲ್ಲಿ, 14 ಜಿಲ್ಲೆಗಳಿಗೆ ಶೇ.65 ಕ್ಕಿಂತ ಕಡಿಮೆ ಫಲಿತಾಂಶ ಬಂದಿದೆ. ಕಲ್ಯಾಣ – ಕರ್ನಾಟಕದ ಜಿಲ್ಲೆಗಳು ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಈ ಪ್ರದೇಶದ ಏಳು ಜಿಲ್ಲೆಗಳಲ್ಲಿ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳು ಮಾತ್ರ ಶೇ.60 ಕ್ಕಿಂತ ಹೆಚ್ಚಿನ ಫಲಿತಾಂಶ ದಾಖಲಿಸಿವೆ. ಉಳಿದ ಜಿಲ್ಲೆಗಳು ಅತ್ಯಂತ ಕಳಪೆ ಪ್ರದರ್ಶನ ನೀಡಿವೆ.
“ಶಿಕ್ಷಕರು ಮತ್ತು ಸಿಬ್ಬಂದಿ ಕೊರತೆಯಂತಹ ನೆಪಗಳನ್ನು ಹೇಳಬೇಡಿ. ದಕ್ಷಿಣ ಕನ್ನಡ ಮತ್ತು ಇತರ ಕೆಲವು ಜಿಲ್ಲೆಗಳು ಉತ್ತಮ ಫಲಿತಾಂಶ ನೀಡಬಹುದಾದರೆ, ಇತರ ಜಿಲ್ಲೆಗಳಿಗೆ ಯಾಕೆ ಸಾಧ್ಯವಿಲ್ಲ. ಡಿಡಿಪಿಐಗಳು ಮತ್ತು ಉಸ್ತುವಾರಿ ಜಿಲ್ಲಾ ಕಾರ್ಯದರ್ಶಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿರುವ ಶಾಲೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ಶಿಕ್ಷಕರು ಚೆನ್ನಾಗಿ ಬೋಧಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಬೇಕು. ಶಿಕ್ಷಕರು ಮತ್ತು ಡಿಡಿಪಿಐಗಳು ಪ್ರಾಮಾಣಿಕವಾಗಿ ಕೆಲಸ ಮಾಡಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ಆಸಕ್ತಿ ವಹಿಸಿದರೆ, ಖಂಡಿತವಾಗಿಯೂ ನಾವು ಉತ್ತಮ ಫಲಿತಾಂಶ ಗಳಿಸುತ್ತೇವೆ” ಎಂದು ಸಿದ್ದರಾಮಯ್ಯ ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿ, ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ, ಮೊಟ್ಟೆ, ಹಾಲು, ಸೂಪ್ ಮತ್ತು ಹಾಸ್ಟೆಲ್ ಸೌಲಭ್ಯಗಳನ್ನು ನೀಡುತ್ತಿದ್ದರೂ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯುತ್ತಿಲ್ಲ ಏಕೆ?” ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
“ಅಧಿಕಾರಿಗಳು ಪೋಷಕರೊಂದಿಗೆ ಮಾತನಾಡಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಮನವೊಲಿಸುವ ಜೊತೆಗೆ ಕಾರಣಗಳನ್ನು ಕಂಡುಹಿಡಿಯಬೇಕು” ಎಂದು ನಿರ್ದೇಶನ ನೀಡಿದರು.
ವಿವೇಕ ಯೋಜನೆಯಡಿ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವಲ್ಲಿ ಅನಗತ್ಯ ವಿಳಂಬ ಮಾಡದಂತೆಯೂ ಅವರು ಎಚ್ಚರಿಕೆ ನೀಡಿದರು.
ಸಿಎಸ್ಆರ್ ನಿಧಿಯಲ್ಲಿ ಪಬ್ಲಿಕ್ ಶಾಲೆ ನಿರ್ಮಾಣ ವಿಳಂಬ- ಡಿಸಿ, ಸಿಇಒಗಳ ಅಸಡ್ಡೆಗೆ ಡಿಸಿಎಂ ಅಸಮಾಧಾನ: ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ಸಿಎಸ್ಆರ್ ಶಾಲೆಗಳ ನಿರ್ಮಾಣ ಯೋಜನೆಯು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣದಿರುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
“ರಾಜ್ಯದಲ್ಲಿ ಪ್ರತಿ ವರ್ಷ 8000 ಕೋಟಿ ರೂ. ಸಿಎಸ್ಆರ್ ನಿಧಿ ಲಭ್ಯವಿದ್ದು, ಇದನ್ನು ಸಿಎಸ್ಆರ್ ಶಾಲೆಗಳ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು ಎಂದು ವರ್ಷದ ಹಿಂದೆಯೇ ಸೂಚನೆ ನೀಡಲಾಗಿತ್ತು. ಆದರೆ ಇದು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ರಾಜ್ಯದ ಕಾರ್ಪೊರೇಟ್ ಸಂಸ್ಥೆಗಳು ಸಿಎಸ್ಆರ್ ನಿಧಿಯನ್ನು ಅನ್ಯ ರಾಜ್ಯಗಳ ಖಾಸಗಿ ಸೇವಾ ಸಂಸ್ಥೆಗಳಿಗೆಗಳಿಗೆ ಚೆಕ್ನಲ್ಲಿ ಕೊಟ್ಟು ಅದರಲ್ಲಿ ಶೇಕಡಾ 50ರಷ್ಟನ್ನು ನಗದು ಸ್ವರೂಪದಲ್ಲಿ ವಾಪಸ್ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇದೊಂದು ಅಕ್ರಮ. ಇದರಿಂದ ನಮ್ಮ ರಾಜ್ಯದ ನಿಧಿ ದುರುಪಯೋಗ ಆಗುತ್ತಿದೆ. ಇದನ್ನು ನಮ್ಮ ರಾಜ್ಯದ ಶಾಲೆಗಳ ಅಭಿವೃದ್ಧಿಗೆ ಬಳಸುವುದು ನಿಮ್ಮ ಜವಾಬ್ದಾರಿ” ಎಂದು ಹೇಳಿದರು.
ಶಾಲೆ ಕಟ್ಟಿ ಕಾರ್ಪೊರೇಟ್ ಸಂಸ್ಥೆಗಳ ಹೆಸರು ಹಾಕಿಕೊಳ್ಳಲಿ: ಕಾರ್ಪೊರೇಟ್ ಸಂಸ್ಥೆಗಳು ನಿಧಿಯನ್ನು ನಮಗೆ ನಗದು ಸ್ವರೂಪದಲ್ಲಿ ಕೊಡುವುದು ಬೇಡ. ಮೂರೂ ಗ್ರಾಮ ಪಂಚಾಯಿತಿಗೆ ಒಂದು ಪಬ್ಲಿಕ್ ಶಾಲೆ ಕಟ್ಟಿಕೊಡಲಿ. ಜಮೀನು ಬೇಕಿದ್ದರೆ ಸರಕಾರದಿಂದಲೇ ಕೊಡೋಣ. ನೀವೇ ಜಾಗ ಗುರುತಿಸಿ. ನಾವು ವಿನ್ಯಾಸ ಕೊಡೋಣ. ಅವರು ಕಟ್ಟಡ ಕಟ್ಟಿ, ಮೂಲಸೌಕರ್ಯ ಒದಗಿಸಲಿ. ಆ ಶಾಲಾ ಕಟ್ಟಡದ ಮೇಲೆ ರಾಜ್ಯ ಸರಕಾರದ ಜತೆಗೆ ಆಯಾ ಸಂಸ್ಥೆಗಳ ಹೆಸರಿನ ಫಲಕ ಹಾಕಿಕೊಳ್ಳಲಿ. ಈ ಶಾಲೆಗಳಿಗೆ ಖಾಸಗಿ ಶಾಲೆಗಳಿಂದ ತಲಾ ಒಬ್ಬರು ನುರಿತ ಶಿಕ್ಷಕರನ್ನು ಪೂರೈಸುವ ಜವಾಬ್ದಾರಿ ವಹಿಸೋಣ” ಎಂದರು.
“ನನ್ನ ಕ್ಷೇತ್ರದಲ್ಲಿ ತಲಾ 9 ರಿಂದ 12 ಕೋಟಿ ರೂಪಾಯಿವರೆಗೂ ವೆಚ್ಚ ಮಾಡಿ 13 ಸಿಎಸ್ಆರ್ ಪಬ್ಲಿಕ್ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಕೆಲವು ಕಡೆ ಮಾತ್ರ ಕೆಲಸ ಆಗುತ್ತಿದೆ. ಬಹುತೇಕ ಕಡೆ ಯಾರೂ ಆಸಕ್ತಿಯನ್ನೇ ವಹಿಸಿಲ್ಲ” ಎಂದು ಕಿಡಿ ಕಾರಿದರು.
ಪತ್ರ ಬರೆದು, ಸಭೆ ನಡೆಸಲು ಸೂಚನೆ: ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿನ ಕಾರ್ಪೊರೇಟ್ ಸಂಸ್ಥೆಗಳಿಗೆ ಕೂಡಲೇ ಪತ್ರ ಬರೆದು, ಸಭೆ ಕರೆದು ಪಬ್ಲಿಕ್ ಶಾಲೆಗಳ ನಿರ್ಮಾಣ ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಿ. ಈವರೆಗೂ ಕಾರ್ಪೊರೇಟ್ ಸಂಸ್ಥೆಗಳು ಏನು ಮಾಡಿವೆ ಎಂಬುದರ ಮಾಹಿತಿ ಪಡೆಯಿರಿ. ಶಿಕ್ಷಣ ಇಲಾಖೆ ವಿನ್ಯಾಸ (ಡಿಸೈನ್) ನೀಡುತ್ತದೆ. ಅದನ್ನು ಆಧರಿಸಿ ಕಟ್ಟಡ ಕಟ್ಟಲು ಸೂಚನೆ ಕೊಡಿ. ಒಂದೊಂದು ತಾಲೂಕಿಗೆ ಒಂದು ಮಾದರಿ ಶಾಲೆ ನಿರ್ಮಿಸಿ, ಅದರ ವಿನ್ಯಾಸದ ಮೇರೆಗೆ ಮೂರು ಪಂಚಾಯಿತಿಗೆ ಒಂದು ಶಾಲೆ ನಿರ್ಮಾಣದ ಗುರಿ ನಿಗದಿ ಮಾಡಿ” ಎಂದು ಡಿಸಿ ಹಾಗೂ ಸಿಇಒ ಗಳಿಗೆ ಸೂಚನೆ ನೀಡಿದರು
“ಶಾಲೆಗಳ ನಿರ್ಮಾಣಕ್ಕೆ ಸಿಎಸ್ಆರ್ ನಿಧಿ ಬಳಕೆ ಸಂಬಂಧ ಬೆಂಗಳೂರು ಕಾರ್ಪೊರೇಟ್ ಸಂಸ್ಥೆಗಳ ಸಭೆ ಕರೆಯಲು ಬೆಂಗಳೂರು ಜಿಲ್ಲಾಧಿಕಾರಿ, ಸಿಇಓಗಳಿಗೆ ಸೂಚನೆ ನೀಡಲಾಗಿದೆ. ಅದೇ ರೀತಿ ಎಲ್ಲ ಜಿಲ್ಲಾಧಿಕಾರಿಗಳು, ಸಿಇಓಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಸಭೆ ಕರೆದು ಸಿಎಸ್ಆರ್ ಶಾಲೆ ನಿರ್ಮಾಣ ತ್ವರಿತಗತಿಯಲ್ಲಿ ಆಗುವಂತೆ ಕ್ರಮ ಕೈಗೊಳ್ಳಬೇಕು. ನಾನೇ ಆಗಾಗ್ಗೆ ಡಿಸಿ ಮತ್ತು ಸಿಇಓಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಯೋಜನೆ ಪ್ರಗತಿ ಬಗ್ಗೆ ಮಾಹಿತಿ ಪಡೆಯುತ್ತೇನೆ” ಎಂದರು.

