
ಜೋಧಪುರ, ರಾಜಸ್ಥಾನ : ಇಲ್ಲಿನ ವಾಯುವ್ಯ ರೈಲ್ವೆಯ ಜೋಧಪುರ ವಿಭಾಗದ ಭಗತ್ ಕಿ ಕೋಠಿ ರೈಲ್ವೆ ನಿಲ್ದಾಣದ ಬಳಿ ದೇಶದ ಮೊದಲ ವಂದೇ ಭಾರತ್ ರೈಲ್ವೆ ಕೋಚ್ ನಿರ್ವಹಣಾ ಡಿಪೋ ನಿರ್ಮಿಸಲಾಗುತ್ತಿದೆ.
ಈ ಅತ್ಯಾಧುನಿಕ ಡಿಪೋವನ್ನು 167 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, 2025 ರ ಅಂತ್ಯದ ವೇಳೆಗೆ ಇದನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಈ ಬಗ್ಗೆ ವಾಯುವ್ಯ ರೈಲ್ವೆಯ ಜೋಧ್‌ಪುರ ವಿಭಾಗದ ಡಿಆರ್‌ಎಂ ಅನುರಾಗ್ ತ್ರಿಪಾಠಿ ಅವರು ಮಾತನಾಡಿದ್ದು, ‘ದೇಶಾದ್ಯಂತ ನಿರ್ಮಿಸಲಾಗುತ್ತಿರುವ ಐದು ವಂದೇ ಭಾರತ್ ನಿರ್ವಹಣಾ ಡಿಪೋಗಳಲ್ಲಿ ಈ ಡಿಪೋ ಕೂಡ ಒಂದು. ಇದನ್ನು ಸುಮಾರು 600 ಮೀಟರ್ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದ್ದು, ಇದರಲ್ಲಿ ಮೂರು ವಂದೇ ಭಾರತ್ ರೈಲುಗಳ ನಿರ್ವಹಣೆಯನ್ನು ಏಕಕಾಲದಲ್ಲಿ ಮಾಡಬಹುದು. 167 ಕೋಟಿ ರೂ. ವೆಚ್ಚದ ಈ ಮಹತ್ವದ ಯೋಜನೆಯು ರಾಜ್ಯದಲ್ಲಿ ಈ ರೀತಿಯ ಮೊದಲ ಸೌಲಭ್ಯವಾಗಲಿದೆ ಮತ್ತು ಇದು ಇಡೀ ಭಾರತೀಯ ರೈಲ್ವೆಯಲ್ಲಿ ವಂದೇ ಭಾರತ್ ರೈಲುಗಳ ನಿರ್ವಹಣೆಗೆ ಪ್ರಮುಖ ಕೇಂದ್ರವಾಗಿ ಜೋಧ್‌ಪುರಕ್ಕೆ ಹೊಸ ಗುರುತನ್ನು ನೀಡುತ್ತದೆ’ ಎಂದು ಮಾಹಿತಿ ನೀಡಿದರು.
ಮೊದಲ ಡಿಪೋ ಜೋಧ್‌ಪುರದಲ್ಲಿ ಸಿದ್ಧವಾಗಲಿದೆ : ದೇಶದಲ್ಲಿ 5 ವಂದೇ ಭಾರತ್ ಕೋಚ್ ನಿರ್ವಹಣಾ ಡಿಪೋಗಳನ್ನು ನಿರ್ಮಿಸಲಾಗುತ್ತಿದೆ. ಅವುಗಳಲ್ಲಿ ಒಂದನ್ನು ಜೋಧ್‌ಪುರದಲ್ಲಿ ಸ್ಥಾಪಿಸಲಾಗುತ್ತಿದೆ. ಇದರಲ್ಲಿ 600 ಮೀಟರ್ ಉದ್ದದ 3 ಪಿಟ್ ಲೈನ್‌ಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಮೂರು ವಂದೇ ಭಾರತ್ ರೈಲುಗಳ ನಿರ್ವಹಣೆಯನ್ನು ಏಕಕಾಲದಲ್ಲಿ ಮಾಡಬಹುದು. ಇದರೊಂದಿಗೆ, 900 ಮೀಟರ್ ಉದ್ದದ ವೀಲ್ ಲೇಥ್ ಮತ್ತು ಡ್ರಾಪ್ ಪಿಟ್ ಲೈನ್ ನಿರ್ಮಾಣವೂ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಹಿರಿಯ ವಿಭಾಗೀಯ ಮೆಕ್ಯಾನಿಕಲ್ ಇಂಜಿನಿಯರ್ ಮೇಜರ್ ಅಮಿತ್ ಸ್ವಾಮಿ ಮಾತನಾಡಿದ್ದು, ‘ವಂದೇ ಭಾರತ್ ಕೋಚ್ ನಿರ್ವಹಣಾ ಡಿಪೋದಿಂದಾಗಿ ಒಂದೇ ಸಮಯದಲ್ಲಿ ಮೂರು ವಂದೇ ಭಾರತ್ ರೈಲುಗಳನ್ನು ಪರಿಶೀಲಿಸಲು ಹಾಗೂ ರೈಲ್ವೆಯ ರ್ಯಾಕ್ ಅನ್ನು ಸಂಪೂರ್ಣವಾಗಿ ಎತ್ತಲು ಸಾಧ್ಯವಾಗುತ್ತದೆ. ಡ್ರಾಪ್ ಪಿಟ್ ಟೇಬಲ್ ಮತ್ತು ವೀಲ್ ಟರ್ನಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು ಬೋಗಿಗಳನ್ನು ವರ್ಗಾಯಿಸಲು ಸುಧಾರಿತ ಮತ್ತು ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗುವುದು’ ಎಂದು ಹೇಳಿದ್ದಾರೆ.
ಡಿಪೋದ ವಿಶೇಷ ಲಕ್ಷಣಗಳು, ಆಧುನಿಕ ತಂತ್ರಜ್ಞಾನದಿಂದ ಕೂಡಿದ ಸೌಲಭ್ಯಗಳು :
- ಮೂರು ಪಿಟ್ ಲೈನ್‌ಗಳಲ್ಲಿ ಮೂರು ರೈಲುಗಳ ಏಕಕಾಲಿಕ ತಪಾಸಣೆ ಮತ್ತು ನಿರ್ವಹಣೆ ಸಾಧ್ಯ.
- 900 ಮೀ ಉದ್ದದ ಡ್ರಾಪ್ ಪಿಟ್ ಲೈನ್ ಮತ್ತು ವೀಲ್ ಲೇತ್ ನಿರ್ಮಾಣ.
- ಇಡೀ ರೈಲನ್ನು ಏಕಕಾಲದಲ್ಲಿ ಎತ್ತುವ ‘ಸಿಂಕ್ರೊನೈಸ್ಡ್ ಲಿಫ್ಟಿಂಗ್’ ಸೌಲಭ್ಯ.
- ಡ್ರಾಪ್ ಪಿಟ್ ಟೇಬಲ್‌ನಿಂದ ಬೋಗಿಗಳನ್ನು ತೆಗೆದು ಜೋಡಿಸಲು ವ್ಯವಸ್ಥೆ.
- ಸ್ವಯಂಚಾಲಿತ ತೊಳೆಯುವ ಘಟಕದ ಮೂಲಕ ರೈಲುಗಳ ಬಾಹ್ಯ ಶುಚಿಗೊಳಿಸುವಿಕೆ
- ಬೋಗಿ ಚಕ್ರಗಳು, ಏರ್ ಬ್ರೇಕ್‌ಗಳು ಮತ್ತು ಇತರ ಉಪಕರಣಗಳನ್ನು ಪರಿಶೀಲಿಸಲು ಆಧುನಿಕ ಪ್ರಯೋಗಾಲಯ.



