ಹೊನ್ನಾವರ ಮೇ. 28: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಂಸದರಾದರೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವುದಾಗಿ ಸಂಕಲ್ಪ ಮಾಡಿದ ಅವರ ಅಭಿಮಾನಿಗಳು ದಿ. 31ರಂದು ಶನಿವಾರ ಹೊಸಾಕುಳಿಯ ಶ್ರೀ ಉಮಾಮಹೇಶ್ವರ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಹೋಮ ಹವನಗಳನ್ನು ಏರ್ಪಡಿಸಿದ್ದಾರೆ.

ಕಾಗೇರಿಯವರು ಸಂಸದರಾದ ಮೇಲೆ ಕೆನರಾ ಕ್ಷೇತ್ರದ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲೆಯಾದ್ಯಂತ ಓಡಾಡಿ ಜನರ ಸಂಪರ್ಕದಲಿದ್ದು ದೆಹಲಿಯಲ್ಲಿ ರೇಲ್ವೆ, ಹೆದ್ದಾರಿ, ಪ್ರವಾಸೋದ್ಯಮ, ಅರಣ್ಯ ಸಮಸ್ಯೆ ಮೊದಲಾದ ವಿಷಯಗಳಲ್ಲಿ ಜನಪರವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಶ್ರಮಕ್ಕೆ ಯಶಸ್ಸು ಸಿಗುತ್ತಿದೆ. ಇತ್ತೀಚೆ ರೈತರ ಬೆಳೆವಿಮಾ ೮೨ ಕೋಟಿ ರೂ. ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರನ್ನು ಅಭಿನಂದಿಸುವ ಕಾರ್ಯಕ್ರಮ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ನಡೆಯಲಿದೆ.
ಶ್ರೀ ಲಕ್ಷ್ಮೀನಾರಾಯಣ, ಶ್ರೀ ಉಮಾಮಹೇಶ್ವರ ಸೇವಾ ಸಮಿತಿ, ಶ್ರೀ ಆಂಜನೇಯ ಸೇವಾ ಸಮಿತಿ, ಯಕ್ಷಕಲಾ ಪ್ರತಿಷ್ಠಾನ ಮತ್ತು ಶಕ್ತಿಕೇಂದ್ರ ಹೊಸಾಕುಳಿ ಇವರ ಸಂಪೂರ್ಣ ಸಹಕಾರದಲ್ಲಿ ಯುವ ಸಾಮಾಜಿಕ ಕಾರ್ಯಕರ್ತ ಎಚ್.ಆರ್. ಗಣೇಶ ಕಾರ್ಯಕ್ರಮವನ್ನು ಸಂಯೋಜಿಸಿದ್ದಾರೆ. ಹೊಸಾಕುಳಿಯಲ್ಲಿ ಈಶ್ವರ ಪಾರ್ವತಿ ಮತ್ತು ಲಕ್ಷ್ಮೀನಾರಾಯಣ ದೇವದಂಪತಿಗಳು ಅನ್ಯೋನ್ಯವಾಗಿ ಕುಳಿತ ಮೂರ್ತಿಗಳಿರುವ ವಿರಳ ದೇವಸ್ಥಾನವಾಗಿದೆ.
ಪಂಚಗ್ರಾಮದ ಜನ ಮಾತ್ರವಲ್ಲ, ಬೇರೆ ಜಿಲ್ಲೆಯ ಜನರು ಸಾಂಸಾರಿಕ ಮತ್ತು ಸಾರ್ವಜನಿಕ ಜೀವನದ ಯಶಸ್ಸಿಗಾಗಿ ಇಲ್ಲಿ ಬಂದು ಪ್ರಾರ್ಥಿಸುತ್ತಾರೆ. ಕಾಗೇರಿಯವರ ಕುರಿತು ಅವರ ಅಭಿಮಾನಿಗಳ ಪರವಾಗಿ ನಾವು ಸಂಕಲ್ಪಿಸಿದ್ದೆವು. ಕಾಗೇರಿಯವರು ಸಪತ್ನಿಕರಾಗಿ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುವ ರುದ್ರಹವನ ಮತ್ತು ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ನಡೆಯುವ ರಾಮತಾರಕ ಹವನ ಮತ್ತು ತಾಲೂಕಿನಲ್ಲಿ ಪ್ರಸಿದ್ದವಾದ ಚಂದಾವರ ಮಾರುತಿ ದೇವರ ಸವಾರಿ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿರುವುದಿಂದ ಮಾರುತಿ ದೇವರಿಗೆ ವಿಶೇಷ ದಂಡಾವಳಿ ಪೂಜೆಗಳನ್ನು 25 ವೈದಿಕರು ನಡೆಸಿಕೊಡಲಿದ್ದಾರೆ.
ನಂತರ ಅಲ್ಲಿ ಪ್ರಸಾದ ಭೋಜನ ಮತ್ತು ವೈದಿಕರ ಆಶೀರ್ವಚನಪೂರ್ವಕ ಅಭಿನಂದನಾ ಸಮಾರಂಭ ನಡೆಯಲಿದೆ. ಕಾಗೇರಿಯವರ ಅಭಿಮಾನಿಗಳು ಮತ್ತು ದೇವರ ಭಕ್ತರು ಆಗಮಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಸಂಯೋಜಕ ಎಚ್.ಆರ್. ಗಣೇಶ ವಿನಂತಿಸಿದ್ದಾರೆ.



