
ಹೊನ್ನಾವರ ಮೇ.15 : ತಾಲೂಕಿನ ಅತ್ಯಂತ ರಮ್ಯ ಕಡಲತೀರ ಮತ್ತು ಅದಕ್ಕೆ ಹೊಂದಿಕೊಂಡ ಗುಡ್ಡ, ಹಸಿರು ಪ್ರದೇಶವಾದ ಅಪ್ಸರಕೊಂಡದಿಂದ ಮಂಕಿ ಮಡಿಯವರೆಗಿನ 7.5 ಕಿ.ಮೀ. ಪ್ರದೇಶವನ್ನು ರಾಜ್ಯದ ಪ್ರಥಮ ಕಡಲವನ್ಯಜೀವಿ ಧಾಮವನ್ನಾಗಿ ಮಾಡಲು ಸರ್ಕಾರ ನಿರ್ಧರಿಸಿದ್ದು ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಕಡಲತೀರದ 835.32 ಹೆಕ್ಟೇರ್ ಅರಣ್ಯ ಭೂಮಿ ಮತ್ತು ನೀರಿನೊಳಗಿನ 5124 ಹೆಕ್ಟರ್ ಭೂಮಿಯನ್ನು ಈ ಕಡಲ ವನ್ಯಜೀವಿಧಾಮ ಒಳಗೊಳ್ಳಲಿದೆ.

ದೇಶದಲ್ಲಿ ಒಟ್ಟಿಗೆ 26 ಇಂತಹ ಕಡಲವನ್ಯಜೀವಿ ಧಾಮವಿದೆ. ರಾಜ್ಯದಲ್ಲಿ ಈ ಪ್ರದೇಶ ಶೇ.100 ರಷ್ಟು ಕಡಲವನ್ಯಜೀವಿ ಧಾಮಕ್ಕೆ ಅನುಕೂಲಕರ ಆದ್ದರಿಂದ ಈ ಪ್ರಸ್ತಾವನೆಯನ್ನು ಅರಣ್ಯ ಇಲಾಖೆ ಸರ್ಕಾರಕ್ಕೆ ಕಳಿಸಿತ್ತು. ಇದರ ನಿರ್ಮಾಣದಿಂದ ಮೀನುಗಾರಿಕೆಗೆ ಮತ್ತು ಅವರ ವಸತಿಗೆ, ಖಾಸಗಿ ಭೂಮಿಗೆ, ಮನೆಗೆ ಯಾವುದೇ ತೊಂದರೆ ಆಗುವುದಿಲ್ಲ. ಕೇವಲ ಅರಣ್ಯ ಇಲಾಖೆಯ, ಸರ್ಕಾರದ ಭೂಮಿ ಮತ್ತು ಚಟುವಟಿಕೆ ರಹಿತ ಕಡಲ ಪ್ರದೇಶವನ್ನು ಇದಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಡಾಲ್ಫಿನ್, ಶಾರ್ಕ್, ತಿಮಿಂಗಲು, ಆಮೆ, ಸಮುದ್ರಸೌತೆ ಮೊದಲಾದ ನೂರಾರು ಸೂಕ್ಷ್ಮ ವಿರಳ ಕಡಲಜೀವಿಗಳು ಈ ಪ್ರದೇಶದಲ್ಲಿ ಜೀವನ ನಡೆಸಿವೆ. ದಂಡೆಯ ಪ್ರದೇಶದಲ್ಲಿ ಸಮುದ್ರ ಮತ್ತು ಗುಡ್ಡದ ಪ್ರದೇಶದಲ್ಲಿ ಕಡಲತಿರದಲ್ಲಿ ಜೀವಿಸುವ ಅಪರೂಪದ ಪ್ರಾಣಿ, ಪಕ್ಷಿ ಪ್ರಬೇಧಗಳು ಇಲ್ಲಿವೆ. ಆದ್ದರಿಂದ ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸರ್ಕಾರದ ಆರ್ಥಿಕ ಸಂಪನ್ಮೂಲ ದೊರೆತಂತೆ ಈ ಕಡಲವನ್ಯಜೀವಿ ಧಾಮವನ್ನು ಅಭಿವೃದ್ಧಿ ಪಡಿಸಲಾಗುವುದು. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಅಗತ್ಯವುಳ್ಳ ಬೇಲಿ, ರಕ್ಷಣಾ ವ್ಯವಸ್ಥೆ ಮತ್ತು ಕಾವಲು ವಸತಿಗಳನ್ನು ನಿರ್ಮಿಸಲಾಗುವುದು. ಹೊನ್ನಾವರದ ಪ್ರವಾಸೋದ್ಯಮಕ್ಕೆ ಇದು ಇನ್ನೊಂದು ರಾಜ್ಯದಲ್ಲಿ ಇನ್ನೆಲ್ಲೂ ಇಲ್ಲದ ಮಹತ್ವದ ಕೊಡುಗೆಯಾಗಲಿದೆ ಎಂದು ಡಿಎಫ್‌ಓ ಯೋಗೇಶ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಹೊನ್ನಾವರ ವಾಣಿಜ್ಯ ಬಂದರಾಗಿದ್ದ ಕಾಲದಲ್ಲಿ ಅಪ್ಸರಕೊಂಡ ಗುಡ್ಡದಿಂದ ಮ್ಯಾಂಗನೀಸ್ ಖನಿಜವನ್ನು ತೆಗೆದು ರಫ್ತು ಮಾಡಲಾಗುತ್ತಿತ್ತು. ಮ್ಯಾಂಗನೀಸ್‌ನಲ್ಲಿ ಕಬ್ಬಿಣದ ಅಂಶ ಕಡಿಮೆ ಬರಲು ಆರಂಭವಾದ ಮೇಲೆ ರಫ್ತು ನಿಂತಿದೆ. ಈ ರಮ್ಯ ಪ್ರದೇಶದಲ್ಲಿ ಅಂರೀಷರ ಗಿರಿಬಾಲೆ ಮತ್ತು ಹಲವು ತಮಿಳು ಚಿತ್ರಗಳ ಚಿತ್ರೀಕರಣವಾಗಿದೆ. ಕೃಷ್ಣ ಉಡುಪುಡಿ ಡಿಎಫ್‌ಓ ಆಗಿದ್ದಾಗ ಅಪ್ಸರಕೊಂಡ, ಇಕೋ-ಬೀಚ್, ಇಡಗುಂಜಿ ತಿರುವಿನಲ್ಲಿ ಗಣೇಶವನ, ರಾಮತೀರ್ಥದಲ್ಲಿ ಪವಿತ್ರವನ, ಶರಾವತಿಯಲ್ಲಿ ಕಾಂಡ್ಲಾವನವನ್ನು ಆರಂಭಿಸಿ ಪ್ರವಾಸೋದ್ಯಮಕ್ಕೆ ನಾಂದಿ ಹಾಡಿದ್ದರು. ನಂತರ ಬಂದ ಡಿಎಫ್‌ಓ ವಸಂತ ರೆಡ್ಡಿ ಇದಕ್ಕೆ ಹೊಸರೂಪ ಕೊಟ್ಟು ಬೆಳೆಸಿದರು. ಈಗ ಅವರು ಸಿಸಿಎಫ್ ಆಗಿ ಸಿರ್ಸಿಯಲ್ಲಿ ಕೆಲಸ ಮಾಡುತ್ತಿದ್ದು ಹೊನ್ನಾವರದಲ್ಲಿ ಡಿಎಫ್‌ಓ ಆಗಿರುವ ಯೋಗೇಶ ಅಪ್ಸರಕೊಂಡದ 5 ಕಿ.ಮೀ. ಬೀಚಿಗೆ ತಂತಿ ಬೇಲಿ ನಿರ್ಮಿಸಿ ಪ್ರವಾಸಿಗರಿಗೆ ಹಲವು ಸೌಲಭ್ಯ ಒದಗಿಸಿದ್ದಾರೆ.

ಈಗ ಕಡಲವನ್ಯಜೀವಿ ಧಾಮದ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಈ ಮೂವರು ಹಿರಿಯ ಅರಣ್ಯ ಅಧಿಕಾರಿಗಳು ತಾಲೂಕಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದು ಸಾವಿರಾರು ಜನರಿಗೆ ಇದರಿಂದ ಉದ್ಯೊಗವಾಗಿದೆ. ರೆಸಾರ್ಟ್, ಹೋಂ ಸ್ಟೇ ಎಂದು ನೂರಾರು ಕೋಟಿ ರೂ.ಗಳ ಹೂಡಿಕೆಯಾಗಿದೆ. ಅರಣ್ಯ ಇಲಾಖೆಯ ಸ್ಥಳದಲ್ಲಿ ಪ್ರವಾಸೋದ್ಯಮಕ್ಕೆ ಪೂರಕ ಯೋಜನೆಯನ್ನು ನಾವು ಆರಂಭಿಸುತ್ತೇವೆ, ಸರ್ಕಾರ ಬೆಂಬಲಿಸುತ್ತದೆ, ಸಾರ್ವಜನಿಕರು ಸದುಪಯೋಗ ಪಡೆಯಬೇಕು, ಜನ ಸಂತೋಷದಿಂದ ಮರಳಬೇಕು ಅನ್ನುತ್ತಾರೆ ಈ ಹಿರಿಯ ಅಧಿಕಾರಿಗಳು.


