IPL 2025: ಐಪಿಎಲ್​ನಿಂದ ಮೂರು ತಂಡಗಳು ಔಟ್

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2025) ಪ್ಲೇಆಫ್ ರೇಸ್ ಮುಂದುವರೆದಿದೆ. ಸದ್ಯ 7 ತಂಡಗಳು ಮುಂದಿನ ಹಂತಕ್ಕೇರಲು ಪೈಪೋಟಿ ಮುಂದುವರೆಸಿದ್ದು, ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮುಂಚೂಣಿಯಲ್ಲಿದೆ. ಇದರ ನಡುವೆ ಮೂರು ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ. ಆ ತಂಡಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ….

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-18ರ 55 ಪಂದ್ಯಗಳು ಮುಗಿದಿವೆ. ಈ ಐವತ್ತೈದು ಪಂದ್ಯಗಳ ಮುಕ್ತಾಯದ ವೇಳೆಗೆ 7 ತಂಡಗಳು ಪ್ಲೇಆಫ್ ರೇಸ್​ನಲ್ಲಿ ಉಳಿದರೆ, ಮೂರು ತಂಡಗಳು ಹೊರಬಿದ್ದಿವೆ. ಹೀಗೆ ಲೀಗ್ ಹಂತದ ಪಂದ್ಯಗಳು ಮುಗಿಯುವ ಮುನ್ನವೇ ಹೊರಬಿದ್ದ ಮೂರು ತಂಡಗಳಾವುವು ಎಂದು ನೋಡುವುದಾದರೆ….

ಚೆನ್ನೈ ಸೂಪರ್ ಕಿಂಗ್ಸ್: ಈ ಬಾರಿಯ ಐಪಿಎಲ್​ನಲ್ಲಿ ಈಗಾಗಲೇ 11 ಪಂದ್ಯಗಳನ್ನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು 9 ಪಂದ್ಯಗಳಲ್ಲಿ ಸೋಲನುಭವಿಸಿದರೆ, 2 ಮ್ಯಾಚ್​ಗಳಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಸಿಎಸ್​ಕೆ ತಂಡಕ್ಕೆ ಇನ್ನೂ 3 ಪಂದ್ಯಗಳಿವೆ. ಈ ಪಂದ್ಯಗಳಲ್ಲಿ ಗೆದ್ದರೂ ಸಿಎಸ್​ಕೆ ತಂಡಕ್ಕೆ ಪ್ಲೇಆಫ್​ಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. 

ರಾಜಸ್ಥಾನ್ ರಾಯಲ್ಸ್: ಆರ್​ಆರ್ ತಂಡವು ಈಗಾಗಲೇ 12 ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು 3 ಮ್ಯಾಚ್​ಗಳಲ್ಲಿ ಮಾತ್ರ. ಇನ್ನುಳಿದ 2 ಪಂದ್ಯಗಳಲ್ಲಿ ಜಯ ಸಾಧಿಸಿದರೂ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮುಂದಿನ ಹಂತಕ್ಕೇರಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ ಆರ್​ಆರ್ ಪಡೆಯ ಪ್ಲೇಆಫ್ ಕನಸು ಕೂಡ ಕಮರಿದೆ.

ಸನ್​ರೈಸರ್ಸ್ ಹೈದರಾಬಾದ್: ಎಸ್​ಆರ್​ಹೆಚ್​ ತಂಡವು ಈಗಾಗಲೇ 11 ಪಂದ್ಯಗಳನ್ನಾಡಿದೆ. ಈ ವೇಳೆ 3 ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನುಳಿದ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೂ ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಪ್ಲೇಆಫ್​ಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. 

ಇನ್ನುಳಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್, ಗುಜರಾತ್ ಟೈಟಾನ್ಸ್ ತಂಡಗಳು ನಡುವೆ ಪ್ಲೇಆಫ್ ಪೈಪೋಟಿ ಮುಂದುವರೆದಿದೆ. ಈ ತಂಡಗಳಲ್ಲಿ ನಾಲ್ಕು ತಂಡಗಳು ದ್ವಿತೀಯ ಸುತ್ತಿನಲ್ಲಿ ಕಣಕ್ಕಿಳಿಯಲಿವೆ.