ಅತ್ತ ಆಪರೇಷನ್ ಸಿಂಧೂರ್, ಇತ್ತ ಶಾಂತಿ ಮಂತ್ರ ಜಪಿಸಿದ ಕರ್ನಾಟಕ ಕಾಂಗ್ರೆಸ್​ಗೆ ಜನ ತರಾಟೆ

ಬೆಂಗಳೂರು, ಮೇ 07: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ್​ ಹೆಸರಲ್ಲಿ ಇಂದು ಬೆಳ್ಳಂಬೆಳಿಗ್ಗೆ ಪಾಕ್​ನ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮಾಡಿದೆ. ಭಯೋತ್ಪಾದಕರ 9 ನೆಲೆಗಳನ್ನು ಧ್ವಂಸಗೊಳಿಸುವ ಮೂಲಕ ನವ ವಧುವಿನ ಕುಂಕುಮ ಅಳಿಸಿದ್ದ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದೆ. ಸದ್ಯ ಪ್ರತೀಕಾರ ತೀರಿಸಿಕೊಂಡ ಹಿನ್ನೆಲೆ ಸೋಶಿಯಲ್​​ ಮೀಡಿಯಾದಲ್ಲಿ ಸಂಭ್ರಮಿಸಲಾಗುತ್ತಿದೆ. ಆದರೆ ಈ ಹೊತ್ತಲ್ಲೇ ಟ್ವೀಟ್​ ಮಾಡುವ ಮೂಲಕ ಶಾಂತಿ ಮಂತ್ರ ಜಪಿಸಿದ್ದ ಕರ್ನಾಟಕ ಕಾಂಗ್ರೆಸ್​  ಅನ್ನು ಜನರು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ಆಕ್ರೋಶ ಬೆನ್ನಲ್ಲೇ ಇದೀಗ ಕಾಂಗ್ರೆಸ್​ ತನ್ನ ಟ್ವೀಟ್​​ನ್ನು ಡಿಲೀಟ್ ಮಾಡಿದೆ.

ಆಕ್ರೋಶ ಬೆನ್ನಲ್ಲೇ ಟ್ವೀಟ್​ ಡಿಲೀಟ್

ಉಗ್ರರ ವಿರುದ್ಧ ಆಪರೇಷನ್​ ಸಿಂಧೂರ್ ಮೂಲಕ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಹೀಗಿರುವಾಗಲೇ ರಾಜ್ಯ ಕಾಂಗ್ರೆಸ್​ ‘ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ’ ಎಂದು ಟ್ವೀಟ್​ ಮಾಡುವ ಮೂಲಕ ಶಾಂತಿ ಮಂತ್ರ ಜಪಿಸಿತ್ತು. ಆದರೆ ಕೆಲವೇ ಕ್ಷಣದಲ್ಲಿ ಕಾಂಗ್ರೆಸ್ಸಿಗರು ಸೇರಿದಂತೆ ಜನರು ತೀವ್ರ ಕಿಡಿಕಾರಿದ್ದರು. ವ್ಯಾಪಕ ಆಕ್ರೋಶ ಬೆನ್ನಲ್ಲೇ ಕಾಂಗ್ರೆಸ್​ ಆ ಟ್ವೀಟ್​​ನ್ನು ಡಿಲೀಟ್​ ಮಾಡಿದೆ. ಬಳಿಕ ಭಾರತೀಯ ಸೇನೆಯನ್ನು ಹೊಗಳುವ ಮೂಲಕ ಮತ್ತೊಂದು ಹೊಸ ಟ್ವೀಟ್ ಮಾಡಿದೆ.

ವಿಶ್ವದ ಬಲಿಷ್ಠ ವಾಯುಪಡೆಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಭಾರತೀಯ ವಾಯುಪಡೆ ಪಾಕ್​ ಮೇಲೆ ದಾಳಿ ಮಾಡುವ ಮೂಲಕ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸೂಕ್ತ ಉತ್ತರ ನೀಡಿದೆ. ನಾವು ಸರ್ಕಾರದೊಂದಿಗೆ ಮತ್ತು ಭದ್ರತಾ ಪಡೆಗಯೊಂದಿಗೆ ನಿಲ್ಲುತ್ತೇವೆ ಎಂದು ರಾಜ್ಯ ಕಾಂಗ್ರೆಸ್​ ಟ್ವೀಟ್ ಮಾಡಿದೆ.

ಡಿಲೀಟ್ ಆದ ಕಾಂಗ್ರೆಸ್​ ಟ್ವೀಟ್​

ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಿದ ಡಿಕೆ ಶಿವಕುಮಾರ್​

ಇನ್ನು ಪಾಕ್​ನ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಕ್ಷಿಪಣಿ ದಾಳಿ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್​ ಕೂಡ ಟ್ವೀಟ್ ಮಾಡಿದ್ದು, ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪಹಲ್ಗಾಮ್​ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ದಾಳಿ ಮಾಡಲಾಗಿದೆ. ನಾವು ಭಾರತ ಸರ್ಕಾರದ ಪರ ಇದ್ದೇವೆ, ಸೇನೆಗೆ ನಮ್ಮ ಬೆಂಬಲ ಇದೆ ಎಂದು ಹೇಳಿದ್ದಾರೆ.