ಯಲ್ಲಾಪುರ: ಭಗವಂತನ ಕೃಪೆ, ತಂದೆ-ತಾಯಿ ಹಾಗೂ ಗುರುಗಳ ಆಶೀರ್ವಾದ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಪ್ರಸಿದ್ಧ ಗಾಯಕ ಜಯತೀರ್ಥ ಮೇವುಂಡಿ ಹೇಳಿದರು.
ತಾಲೂಕಿನ ತಟಗಾರಿನ ಸ್ವರಮಾಧುರಿ ಸಂಗೀತ ವಿದ್ಯಾಲಯದ ಸಭಾಭವನದಲ್ಲಿ ಗುರು ಪೂರ್ಣಿಮೆ ನಿಮಿತ್ತ ಹಮ್ಮಿಕೊಂಡ ಗುರು ಪೂಜೆ ಮತ್ತು ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬದಲಾದ ಕಾಲಘಟ್ಟದಲ್ಲಿ ಗುರು-ಶಿಷ್ಯ ಪರಂಪರೆಯ ಮೌಲ್ಯ ಕ್ಷೀಣಿಸುತ್ತಿದೆ. ಆದರೆ ಸಂಗೀತ ಕ್ಷೇತ್ರದಲ್ಲಿ ಮಾತ್ರ ಗುರು-ಶಿಷ್ಯ ಪರಂಪರೆ ಈಗಲೂ ಉಳಿದುಕೊಂಡಿದೆ ಎಂದರು.
ಸಂಗೀತ ಕಾರ್ಯಕ್ರಮದಲ್ಲಿ ಜಯತೀರ್ಥ ಮೇವುಂಡಿ ಗಾಯನ ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳಾದ ಸಾತ್ವಿಕ ಬೆಂಗಳೂರು, ಮಾಧವಿ ಗಾಂವ್ಕರ, ಚೈತನ್ಯಾ ಪರಬ್, ವಿಭಾ ಹೆಗಡೆ, ಲಲಿತ್ ಮೇವುಂಡಿ ಗಾಯನ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಗಣೇಶ ಭಾಗ್ವತ್ ಗುಂಡ್ಕಲ್, ರಾಜೇಂದ್ರ ಭಾಗ್ವತ್, ಸಂಜೀವ್ ಕಿತ್ತೂರ್ ತಬಲಾ ಹಾಗೂ ಕಿರಣ ಅಯಾಚಿತ್, ಭರತ್ ಹೆಬ್ಬಲಸು ಹಾರ್ಮೊನಿಯಂ ಸಾಥ್ ನೀಡಿದರು.